ಸಾಲ ನೀಡುವಲ್ಲಿ ಸಹಕಾರಿ ಬ್ಯಾಂಕ್‌ಗಳು ನಂಬರ್ ವನ್: ಸಚಿವ ಎಸ್.ಟಿ. ಸೋಮಶೇಖರ್

ಮಂಗಳೂರು, ನ.೧೭- ಸಹಕಾರಿ ಬ್ಯಾಂಕ್‌ಗಳಲ್ಲಿ ಹಣ, ಒಡವೆಗಳನ್ನು ಇರಿಸಿದವರಿಗೆ ಮೋಸವಾಗದಂತೆ ಕ್ರಮ ವಹಿಸುವ ಜತೆಯಲ್ಲೇ ಯಾವುದೇ ದಾಖಲೆಗಳಿಲ್ಲದೆ ಸಾಲ ನೀಡುವ ಬ್ಯಾಂಕ್‌ಗಳ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮವನ್ನೂ ವಹಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ರವಿವಾರ ರಾಜ್ಯ ಮಟ್ಟದ ೬೭ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕರ್ನಾಟಕದ ೨೮೦ ಸಹಕಾರಿ ಬ್ಯಾಂಕುಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಲ ನೀಡಿಕೆ ಹಾಗೂ ವಸೂಲಾತಿಯಲ್ಲೂ ನಂಬರ್ ವನ್ ಸ್ಥಾನದಲ್ಲಿವೆ. ಆದರೆ ಯಾವುದೋ ಒಂದು ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ನಡೆದ ಮೋಸಕ್ಕೆ ಎಲ್ಲ ಸಹಕಾರಿ ಬ್ಯಾಂಕ್‌ಗಳನ್ನು ಹೊಣೆಯಾಗಿಸಲಾಗದು. ಮೋಸ, ವಂಚನೆ ನಡೆದಿರುವ ಬ್ಯಾಂಕ್‌ನ ಸಂಬಂಧಪಟ್ಟವರನ್ನು ಜೈಲಿಗಟ್ಟುವ ಕೆಲಸವನ್ನು ಮಾಡಲಾಗುವುದು ಎಂದು ಸಹಕಾರ ಸಚಿವ ತಿಳಿಸಿದರು. ಕೇಂದ್ರ ಸರಕಾರದ ಆತ್ಮ ನಿರ್ಭರ ಯೋಜನೆಯಡಿ ರಾಜ್ಯಕ್ಕೆ ಮೀಸಲಿಟ್ಟ ಅನುದಾನದಲ್ಲಿ ಸಹಕಾರಿ ಕ್ಷೇತ್ರಕೆ ೬೦೦ ಕೋಟಿ ರೂ. ಒದಗಿಸಬೇಕು ಎಂದು ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಲಾಗಿದ್ದು, ಈ ರೀತಿ ಪ್ರಸ್ತಾವ ಸಲ್ಲಿಸಿದ ಮೊದಲ ರಾಜ್ಯ ಕರ್ನಾಟಕ ಎಂದವರು ಹೇಳಿದರು. ಕರ್ನಾಟಕದ ಮೈಸೂರು, ಬೆಂಗಳೂರು, ಬೆಳಗಾವಿ ಹಾಗೂ ಕಲಬುರಗಿ ನಾಲ್ಕು ಸಹಕಾರಿ ವಲಯಗಳಲ್ಲಿ ಆರ್ಥಿಕ ಸ್ಪಂದನದಡಿ ಸಾಲ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನೀಡಲಾದ ಸಾಲ ಯಾವ ರೀತಿಯಲ್ಲಿ ಬಳಕೆಯಾಗುತ್ತಿದೆ ಎಂಬ ಬಗ್ಗೆ ಮೇಲ್ವಿಚಾರಣೆಗಾಗಿ ಪ್ರತಿ ಜಿಲ್ಲೆಗಳಲ್ಲೂ ನೋಡೆಲ್ ಅಧಿಕಾರಿಗಳ ನೇಮಕಕ್ಕೆ ಚಾಲನೆ ನೀಡಲಾಗಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು. ಕಾರ್ಯಕ್ರಮದಲ್ಲಿ ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಅಲ್ಲದೆ ಉತ್ತಮ ನವೋದಯ ಸ್ವ ಸಹಾಯ ಸಂಘಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ನಡೆದ ಸಹಕಾರ ಜಾಥಾಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಚಾಲನೆ ನೀಡಿದರು. ಮೇಯರ್ ದಿವಾಕರ ಪಾಂಡೇಶ್ವರ ಸಹಕಾರ ಸಂಘಗಳ ಮಳಿಗೆ ಉದ್ಘಾಟಿಸಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಸಹಕಾರಿ ಧ್ವಜಾರೋಹಣಗೈದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕರಾದ ಮೀನು ಮಾರಾಟ ಮಹಾ ಮಂಡಳದ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಕೆಎಂಎಫ್ ಅಧ್ಯಕ್ಷ ರವಿರಾಜ ಹೆಗ್ಡೆ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಷಡಕ್ಷರಿ, ಸಹಕಾರ ಸಂಘಗಳ ನಿಬಂಧಕ ಎಸ್.ಝಿಯಾವುಲ್ಲಾ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಸಹಕಾರ ಸಂಘಗಳ ಅಪರ ನಿಬಂಧಕ ದೇವರಾಜ್ ಸಿ.ಎನ್., ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಆರ್.ಶ್ರೀಧರ್, ಸಹಕಾರ ಸಂಘಗಳ ಉಪ ನಿಬಂಧಕರಾದ ಪ್ರಕಾಶ್ ರಾವ್, ಪ್ರವೀಣ್ ಬಿ. ನಾಯಕ್, ಬಿ.ಕೆ.ಸಲೀಂ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಬಿ., ಉಡಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ರಾಜ್ಯ ಸಹಕಾರ ಮಹಾ ಮಂಡಳದ ಆಡಳಿತಾಧಿಕಾರಿ ವೈ.ಎಚ್.ಗೋಪಾಲಕೃಷ್ಣ, ವ್ಯವಸ್ಥಾಪಕ ನಿರ್ದೇಶಕರಾದ ಡಾ.ಕೆ.ಸಿ.ಯತೀಶ್ ಕುಮಾರ್, ಎಸ್.ಎನ್.ಅರುಣ್ ಕುಮಾರ್, ಸಹಕಾರ ಸಂಘಗಳ ಉಪ ನಿರ್ದೇಶಕ ಕೆ.ಎಸ್.ಬಾಲಸುಬ್ರಹ್ಮಣ್ಯ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ್ ಎಸ್. ಸಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಸಹಕಾರಿ ಸಂಘ ಹಾಗೂ ಸೊಸೈಟಿಗಳ ಐವರು ಪ್ರತಿನಿಧಿಗಳಿಗೆ ಜನೌಷಧಿ ಮಾರಾಟ ಮಳಿಗೆಯ ಅನುಮತಿ ಪತ್ರವನ್ನು ಹಸ್ತಾಂತರಿಸಲಾಯಿತು. ಬಡವರ ಬಂಧು ಫಲಾನುಭವಿಗಳಿಗೆ ವಿಶೇಷ ಸವಲತ್ತುಗಳ ಚೆಕ್ ವಿತರಣೆ, ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ, ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ, ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ವಿಶೇಷ ಪ್ರಶಸ್ತಿ, ಉತ್ತಮ ನವೋದಯ ಸ್ವಸಹಾಯ ಸಂಘಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೆ ಆರಂಭಕ್ಕೆ ಮೊದಲು ಸಹಕಾರ ಇಲಾಖೆಯ ನಿವೃತ್ತ ಅಪರ ನಿಬಂಧಕ ಶಶಿಧರ ಎಲೆ ದಿಕ್ಸೂಚಿ ಭಾಷಣ ನೀಡಿದರು. ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.