
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಅ.21: ಧೀರ್ಘಾವಧಿಯಿಂದ ಬಾಕಿ ಇರುವ ತಮ್ಮ ಬೆಳೆ ಸಾಲವನ್ನು ಶೇ 50 ರಷ್ಟುನ್ನು ಒಂದೇ ಬಾರಿ ತೀರುವಳಿ ಯೋಜನೆಯಡಿ ಪಾವತಿಸಿಕೊಂಡು ಸಾಲದಿಂದ ಮುಕ್ತರನ್ನಾಗಿ ಮಾಡುವಂತೆಕರ್ನಾಟಕ ಗ್ರಾಮೀಣ ಬ್ಯಾಂಕ್ ವಿರುದ್ದ ಇಂದು ನಗರದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನದ ಬಳಿಯಿಂದ ಎತ್ತಿನ ಬಂಡಿ, ಟ್ರಾಕ್ಟರ್ ಗಳೊಂದಿಗೆ ನೂರಾರು ರೈತರು ಗಡಗಿ ಚೆನ್ನಪ್ಪ ಸರ್ಕಲ್, ಮೀನಾಕ್ಷಿ ಸರ್ಕಲ್, ಹಳೇ ತಾಲೂಕಯ ಕಚೇರಿ ಸರ್ಕಲ್ ಮೂಲಕ ಪುನಃ ಗಡಗಿ ಚೆನ್ನಪ್ಪ ಸರ್ಕಲ್, ಸತ್ಯನಾರಾಯಣ ಪೇಟೆ ಮುಖಾಂತರ ಬ್ಯಾಂಕ್ ಮುಂಭಾಗದಲ್ಲಿ ಪ್ರತಿಭಟನೆಯ ಸಭೆ ನಡೆಯಿತು.ಪ್ರತಿಭಟನೆ ವೇಳೆ ಬ್ಯಾಂಕ್ ವಿರುದ್ದ ಮತ್ತು ಇಷ್ಟೆಲ್ಲಾ ಹೋರಾಟ ಮಾಡಿದರೂ ಇದಕ್ಕೆ ಪರಿಹಾರ ಕಂಡುಕೊಳ್ಳಲು ಮಧ್ಯಸ್ಥಿಕೆವಹಿಸಲು ಮುಂದಾಗದ ಸರ್ಕಾರಗಳ ವಿರುದ್ದ ಘೋಷಣೆ ಕೂಗಲಾಯ್ತು.ನಗರದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಮುಂದೆ ರೈತರು ಕಳೆದ ಹಲವು ತಿಂಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.ಈ ಭಾರತೀಯ ಕಿಸಾನ್ ಒಕ್ಕೂಟದ ರಾಕೇಶ್ ಟಿಕಾಯತ್ ಇಂದಿನ ಹೋರಾಟದಲ್ಲಿ ಪಾಲ್ಗೊಳ್ಳಬೇಕಿತ್ತು. ಕಾರಣಾಂತರಗಳಿಂದ ಅವರು ಬರಲಿಲ್ಲ. ಆದರೆ ವರ್ಚುವಕ್ ಮೂಲಕ ಮಾತನಾಡಿ ಬ್ಯಾಂಕ್ ಗಳು ರೈತರಿಗೆ ಸಹಕಾರಿಯಾಗಿರಬೇಕು ಹೊರತು, ಮಾರಕವಾಗಿರಬಾರದು, ಇಂತಹ ಹೋರಾಟದ ಬಗ್ಗೆ ರಾಜ್ಯದ ಮುಖ್ಯ ಮಂತ್ರಿಗಳು ಗಮನ ಹರಿಸಿ ಬಗೆಹರಿಸಬೇಕು ಎಂದು ಆಗ್ರಹಿಸಿದರು.ಇದು ಕೇವಲ ಕರ್ನಾಟಕದ ಸಮಸ್ಯೆ ಅಲ್ಲ ಪೂರ ದೇಶದ ಸಮಸ್ಯೆ ಆಗಿದೆ. ಈ ಬಗ್ಗೆ ಸಂಸತ್ ನಲ್ಲಿ ಸಹ ಹೋರಾಟ ನಡೆಸಲಿದೆಂದರು. ರೈತರು ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿರುದ್ಧ ಸತತ 250 ಕ್ಕೂ ಹೆಚ್ಚು ದಿನಗಳಿಂದ ನಿರಂತರವಾಗಿ ಹೋರಾಟ ಹಮ್ಮಿಕೊಂಡು ತಾವು ಪಡೆದ ಸಾಲ ಕಟ್ಟಲು ಒಂದೇ ಬಾರಿ ತೀರುವಳಿ ಮಾಡುವ ಅವಕಾಶ ನೀಡಿ ಎಂದು ಕೋರುತ್ತಿದ್ದಾರೆ. ಆದರೆ, ಬ್ಯಾಂಕಿನ ಅಧಿಕಾರಿ ವರ್ಗ ರೈತರ ದನಿಯನ್ನೇ ಆಲಿಸಲು ಸಿದ್ಧವಿಲ್ಲ. ಬೇಕಾಬಿಟ್ಟಿ ಬಡ್ಡಿ ವಿಧಿಸಿ ರೈತರಿಂದ 50-60 ಪಟ್ಟು ಹೆಚ್ಚಿನ ವಸೂಲಾತಿಗೆ ನಿಂತಿದ್ದಾರೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಶಾಸಕ ಬಿ.ಆರ್.ಪಾಟೀಲ್ ಆರೋಪಿಸಿದರು.ಒಬ್ಬ ರೈತ 1 ಲಕ್ಷ ಸಾಲ ಪಡೆದಿದ್ದರೆ ಇದರ ಮೊತ್ತ ಈಗ 25 ಲಕ್ಷ ಆಗಿದೆ. ಇದೇ ರೀತಿ 10 ಲಕ್ಷ ಪಡೆವರ ಸಾಲದ ಮೊತ್ತ 50-60 ಲಕ್ಷ ರೂ. ಆಗಿದೆ. ಹೀಗೆ ಆದರೆ, ರೈತರು ಸಾಲ ವಾಪಸ್ ಕಟ್ಟುವುದು ಕಷ್ಟ. ಭೂಮಿ ಮಾರಿದರೂ ಅಷ್ಟು ಹಣ ಹೊಂದಿಸಲಾಗದು. ಇದೇ ಕಾರಣಕ್ಕೆ ರೈತರಿಗೆ ಒಂದೇ ಬಾರಿ ತೀರುವಳಿ ಮಾಡುವ ಅವಕಾಶ ನೀಡಿ ಎಂದರು.ರಾಜ್ಯದ 22 ಜಿಲ್ಲೆಗಳಲ್ಲಿ ಇರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನಿಂದ ಸುಮಾರು 30-40 ಲಕ್ಷ ರೈತರು ಸಾಲ ಪಡೆದುಕೊಂಡಿದ್ದಾರೆ. ಅಲ್ಲಿಗೆ ಅವರ ಕುಟುಂಬಸ್ಥರು ಸೇರಿ 1.2 ಕೋಟಿಯಷ್ಟು ಜನರು ಸದ್ಯ ಶೋಷಣೆಗೆ ಈಡಾಗುತ್ತಿದ್ದಾರೆ. ಇಂತಹ ರೈತರ ಪರ ಸರ್ಕಾರ ನಿಲ್ಲಬೇಕೆಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಮಾಧವ ರೆಡ್ಡಿ, ಕೈಗಾರಿಕೆಗಳ ಸಾಲ ಮನ್ನಾ ಮಾಡ್ತಾರ, ರೈತರಿಗೆ ಕಿರುಕುಳ ಕೊಡಲ್ಲ ಅಂತಾರ, ಒಂದು ಲಕ್ಷ ರೂಗೆ ಕುರುಗೋಡಿನಲ್ಲಿ ರೈತ ಹುಸೇನ್ ಅವರ ಮನೆ ಹರಾಜು ಹಾಕಿದ್ದಾರೆ. ಸಾಲದ ಶೇ 50 ಕಟ್ಟಲು ನಾವು ರೆಡಿ ಇದ್ದೇವೆಂದರೂ ನಮ್ಮ ಬೇಡಿಕೆಗೆ ಏಕೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಶಾಸಕರು, ಸಚಿವರು ಮಾತನಾಡುವುದಿಲ್ಲ ಏಕೆ ಎಂದು ತಮ್ಮ ಆಕ್ರೋಶದ ನುಡಿಗಳನ್ನು ಆಡಿದರು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಈ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಿದ್ದಾರೆ. ಅವರೊಡನೆ ಮಾತುಕತೆ ನಡೆಸಿದ ನಂತರ ನಮ್ಮ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಿದೆಂದರು.ವೇದಿಕೆಯಲ್ಲಿ ಎಐಕೆಎಂಕೆಎಸ್ ಸಹ ಸಂಚಾಲಕಿ ಎಸ್.ಝಾನ್ಸಿ, ಕಿಸಾನ್ ಸಂಘರ್ಷ ಸಮಿತಿ ಅಧ್ಯಕ್ಷೆ ಡಾ. ಸುನಲೆಂ,ಚಾಮರಸ ಮಾಲೀಪಾಟೀಲ್, ಬೆಳಗುರ್ಕಿ ಹನುಮನಗೌಡ, ವೀರಸಂಗಯ್ಯ, ಬಡಗಲಪುರ ನಾಗೇಂದ್ರ, ರಾಜ್ಯ ರೈತ ಸಂಘದ ಅಧ್ಯಕ್ಷ ಆರ್.ಮಾಧವರೆಡ್ಡಿ ಕರೂರು, ವಕೀಲ, ಹೋರಾಟಗಾರ ಚಾಗನೂರು ಮಲ್ಲಿಕಾರ್ಜುನರೆಡ್ಡಿಸೇರಿದಂತೆ ಹಲವು ರಾಷ್ಟ್ರೀಯ, ರಾಜ್ಯ ನಾಯಕರು ಇದ್ದರು.