ಸಾಲ ಕಂತು ಪಾವತಿಗೆ ಕಾಲಾವಕಾಶಕ್ಕೆ ಆಗ್ರಹಿಸಿ ಮನವಿ

ಹುಬ್ಬಳ್ಳಿ, ಮೇ 5: ವಿವಿಧ ಸಂಘ ಸಂಸ್ಥೆಗಳಿಂದ ಮತ್ತು ಸ್ತ್ರೀ ಶಕ್ತಿ ಗುಂಪುಗಳಿಂದ ಪಡೆದ ಸಾಲದ ಕಂತು ಪಾವತಿಸಲು ಕಾಲಾವಕಾಶ ನಿಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಅವರ ಮೂಲಕ ಧಾರವಾಡ ಜಿಲ್ಲಾ ಬಹುಜನ ಸಮಾಜ ಪಾರ್ಟಿ ಮನವಿ ಮಾಡಿದೆ.
ಕೊರೊನಾ ಸಂಕಷ್ಟಕ್ಕೆ ಸಿಲಿಕಿರುವ ಜನರ ಜೀವ ರಕ್ಷಣೆ ಮಾಡುವ ಸಲುವಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಲಾಕ್‍ಡೌನ ಜಾರಿಮಾಡಿದ್ದರಿಂದ ಕೂಲಿ ಕಾರ್ಮಿಕರು, ಬಡವರು ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದಾರೆ. ಲಾಕ್‍ಡೌನಿಂದ ಜನತೆ ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಬಡ ಜನರು ಕೆಲವು ಮೈಕ್ರೋ ಫೈನಾನ್ಸ್, ಸ್ತ್ರೀ ಶಕ್ತಿ ಗುಂಪುಗಳಲ್ಲಿ ಹಾಗೂ ಸಂಘ ಸಂಸ್ಥೆಗಳಿಂದ ಪಡೆದ ಸಾಲವನ್ನು ಇಂತಹ ಕಷ್ಟದ ಸಮಯದಲ್ಲಿ ಪಾವತಿಸಲು ಆಗುತ್ತಿಲ್ಲ. ಆದರೆ ಕೆಲವು ಸಂಸ್ಥೆಗಳಿಂದ ಬಡವರಿಗೆ ಕಿರುಕುಳವಾಗುತ್ತಿದ್ದು ಸಂಕಷ್ಟ ಅನುಭವಿಸುತ್ತಿದಾರೆ.
ಆದ್ದರಿಂದ ಸರಕಾರ ಸಾಲ ಮರುಪಾವತಿ ಕಂತುಗಳಿಗೆ ಕಾಲಾವಕಾಶ ನಿಡಬೇಕು ಎಂದು ಧಾರವಾಡ ಜಿಲ್ಲಾ ಬಹುಜನ ಸಮಾಜ ಪಾರ್ಟಿ ಮುಖಂಡರಾದ ರೇವಣಸಿದ್ದಪ್ಪ ಹೊಸಮನಿದೇಸಾಯಿ ಅವರ ನೇತೃತ್ವದಲ್ಲಿ ತಹಶೀಲ್ದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಿಸಾರ್ ಅಹಮದ್ ಮುಲ್ಲಾ, ಇಮ್ತಿಯಾಜ ಬಿಜಾಪುರ, ಮಂಜುನಾಥ ಆರೆರ, ಈರಣ್ಣ ಮನಗೂಳಿ ಪಾಲ್ಗೊಂಡಿದ್ದರು.