ಸಾಲು ಮರದ ತಿಮ್ಮಕ್ಕ ರಂತೆ ಪ್ರತಿಯೊಬ್ಬರೂ ಸಸಿಗಳನ್ನು ಬೆಳೆಸಿ: ಗಂಗಣ್ಣ ಸ್ವಾಮಿ

ಬೀದರ.ಮಾ.28: ಸಾಲು ಮರದ ತಿಮ್ಮಕ್ಕ ಅವರಂತೆ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಣ್ಣ ಸ್ವಾಮಿ ನುಡಿದರು.
ತಾಲ್ಲೂಕಿನ ರೇಕುಳಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೊ ಕ್ಲಬ್ ವತಿಯಿಂದ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಹಾಗೂ ಕೋವಿಡ್‍ನೊಂದಿಗೆ ಬದುಕು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕೃತಿ ತನ್ನ ಸರ್ವಸ್ವವನ್ನೂ ಮಾನವನಿಗೆ ನೀಡಿದೆ. ಹೀಗಾಗಿ ಅದನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಳ್ಳಬೇಕು. ಅರಣ್ಯ ನಾಶದಿಂದ ಮಳೆ ಕಡಿಮೆಯಾಗಿದೆ. ನೈರ್ಮಲ್ಯ ಹಾಳುಗೆಡವಿದರೆ ಸಾಂಕ್ರಾಮಿಕ ರೋಗಗಳು ಹೆಚ್ಚಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿಯ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕಿ ಗೀತಾ ಎಸ್.ಗಡ್ಡಿ, ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿಣಿ ಮಂಡಳಿ ಸದಸ್ಯ ಬಾಬುರಾವ್ ದಾನಿ ಮಾತನಾಡಿದರು.
ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಜಿಲ್ಲಾ ಸಂಯೋಜಕ ಸಂಜೀವಕುಮಾರ ಸ್ವಾಮಿ, ಎಸ್‍ಡಿಎಂಸಿ ಅಧ್ಯಕ್ಷ ರಾಜಶೇಖರ ವಗದಾಳೆ, ಸದಸ್ಯರಾದ ಎಲಿಸ್, ಅಡೆಪ್ಪ, ಮುಖ್ಯಶಿಕ್ಷಕಿ ಶೈಲಾಕುಮಾರಿ ಇದ್ದರು.