ಸಾಲಿಯವರ ಕಲಾಕೃತಿಗಳು ನಾಡಿಗೆ ವಿಶಿಷ್ಟವಾದ ಕಾಣಿಕೆ: ನಾಡೋಜ್ ಖಂಡೇರಾವ್

ಕಲಬುರಗಿ,ನ.29: ಶ್ರೇಷ್ಠ ಕಲಾವಿದ ಸೋಮಶೇಖರ್ ಸಾಲಿ ಅವರ ಕಲಾಕೃತಿಗಳು ನಾಡಿಗೆ ವಿಶಿಷ್ಟವಾದ ಕಾಣಿಕೆಗಳಾಗಿವೆ ಎಂದು ನಾಡೋಜ್ ಡಾ. ಜೆ.ಎಸ್. ಖಂಡೇರಾವ್ ಅವರು ಹೇಳಿದರು.
ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಸೋಮಶೇಖರ್ ಸಾಲಿ ಅವರ ಜನ್ಮಶತಮಾನೋತ್ಸವ ನಿಮಿತ್ಯದ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಸಾಲಿ ಅವರು ಸಂಘಟಕರು, ಹಿರಿಯ ವಾಣಿಜ್ಯೋದ್ಯಮಿಗಳು, ಶೈಕ್ಷಣಿಕ, ಸಾಹಿತ್ಯಕ ಹಾಗೂ ರಾಜಕೀಯ ಸೇರಿ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡವರು ಎಂದರು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ಕಲಾವಿದ ಡಾ. ಎ.ಎಸ್. ಪಾಟೀಲ್ ಅವರು ಮಾತನಾಡಿ, ಹಿರಿಯ ಕಲಾವಿದ ಸಾಲಿಯವರೊಂದಿಗೆ ಒಡನಾಟ, ಕಲಾ ಜೀವನ, ಕಲಾಕೃತಿಗಳ ಕುರಿತು ಮೆಲುಕು ಹಾಕಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ಡಾ. ವಿ.ಜಿ. ಅಂದಾನಿ ಅವರು ಮಾತನಾಡಿ, ಸೋಮಶೇಖರ್ ಎಂ. ಸಾಲಿ ಅವರು ಅಕ್ಯಾಡೆಮಿ ಅಧ್ಯಕ್ಷರಾಗಿ ಮಾಡಿದ ಕೆಲಸ ಅವರ ಸಾಧನೆ ನಾಡಿಗೆ ಬಹುದೊಡ್ಡ ಕಾಣಿಕೆಯಾಗಿದೆ. ವಿಶೇಷವಾಗಿ ಸಂಚಾರಿಕಲಾ ಗ್ಯಾಲರಿಯಂತಿರುವ ಸಂಚಾರಿ ವಾಹನ ಇಡೀ ದೇಶಕ್ಕೆ ಮಾದರಿಯಾಗಿದೆ. ಇಂತಹ ಕೆಲಸ ಲೋಕಕ್ಕೆ ಮಹತ್ತರ ಕೊಡುಗೆಯಾಗಿದೆ ಎಂದರು.
ವಿಜಯಪುರದ ಸಾಲಿ ಪ್ರತಿಷ್ಠಾನ ಅಧ್ಯಕ್ಷ ಪಿ.ಎಸ್. ಕಡೇಮನಿ ಅವರು ವೇದಿಕೆ ಮೇಲೆ ಉಪಸಿತ್ಥಿರಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ವಿದ್ಯಾಧರ್ ಸಾಲಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಕಾರ್ಯದರ್ಶಿ ರಮೇಶ್ ಚವ್ಹಾಣ್ ಅವರು ವಂದಿಸಿದರು. ಬುಧವಾರ ಬೆಳಿಗ್ಗೆ ಸೋಮಶೇಖರ್ ಎಂ. ಸಾಲಿ ಅವರ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು. ನಿತಿನ್ ಚನ್ನಬಸವ ಸಾಲಿ ಅವರು ಸಂಗೀತ ಸೇವೆ ಸಲ್ಲಿಸಿದರು. ಕಾಲೇಜಿನ ಸಿಬ್ಬಂದಿಗಳು, ಹಿರಿಯ ಕಲಾವಿದರು, ಯುವ ಕಲಾವಿದರು ಸಹ ಪಾಲ್ಗೊಂಡಿದ್ದರು. ನವೆಂಬರ್ 28ರಿಂದ 30ರವರೆಗೆ ಸಾಲಿ ಅವರ ಚಿತ್ರಕಲಾ ಪ್ರದರ್ಶನವನ್ನು ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ ಚಿತ್ರಕಲಾವಿದರು, ಕಲಾ ಸಕ್ತರು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.