ಸಾಲಬಾಧೆ: ವಸ್ತಾರಿ ಗ್ರಾಮದ ರೈತ ನೇಣಿಗೆ ಶರಣು

ಕಲಬುರಗಿ:ಎ.2: ಸಾಲಬಾಧೆಯಿಂದ ಚಿಂತೆಗೊಳಗಾದ ರೈತನೋರ್ವ ನೇಣಿಗೆ ಶರಣಾದ ಘಟನೆ ಜೇವರ್ಗಿ ತಾಲ್ಲೂಕಿನ ವಸ್ತಾರಿ ಗ್ರಾಮದಲ್ಲಿ ವರದಿಯಾಗಿದೆ. ಮೃತನಿಗೆ ರಮೇಶ್ ತಂದೆ ಹಣಮಂತರಾಯ್ ಅತನೂರ್ ಎಂದು ಗುರುತಿಸಲಾಗಿದೆ.
ರಮೇಶನು ತನ್ನ ಸ್ವಂತ ಊರಿನಲ್ಲಿ ತನ್ನ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಮಾಡುತ್ತಿದ್ದ. ಕಳೆದ ನಾಲ್ಕೈದು ವರ್ಷಗಳಿಂದ ಸರಿಯಾದ ಫಸಲು ಬರದೇ ಇದ್ದ ಕಾರಣ ಸಾಲ ಮಾಡಿಕೊಂಡು ಉದ್ಯೋಗ ಅರಸಿಕೊಂಡು ಪತ್ನಿಯ ಊರಿಗೆ ಹೋಗುತ್ತೇನೆ ಎಂದು ವಸ್ತಾರಿ ಗ್ರಾಮದಲ್ಲಿ ಕೂಲಿ, ನಾಲಿ ಮಾಡಿಕೊಂಡಿದ್ದ.
ಆದಾಗ್ಯೂ, ಸಾಲ ಹೆಚ್ಚುತ್ತ ಹೋಗುತ್ತಿದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗಿದೆ. ಮೃತ ರೈತನು ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ 1.80 ಲಕ್ಷ ರೂ.ಗಳು, ಸಹಕಾರಿ ಬ್ಯಾಂಕ್‍ನಲ್ಲಿ 65000ರೂ.ಗಳು ಹಾಗೂ ಖಾಸಗಿ ಸಾಲವಾಗಿ 5 ಲಕ್ಷ ರೂ.ಗಳು ಸೇರಿ ಒಟ್ಟು 7.45 ಲಕ್ಷ ರೂ.ಗಳ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಪತ್ನಿ ಸಾವಿತ್ರಿ ಅತನೂರ್, ಪುತ್ರಿ ಪ್ರೀತಿ, ಪುತ್ರ ಪ್ರದೀಪ್ ಅವರನ್ನು ಒಳಗೊಂಡ ಕುಟುಂಬವು ಯಜಮಾನನ್ನು ಕಳೆದುಕೊಂಡು ದು:ಖದಲ್ಲಿ ಮುಳುಗಿದೆ. ಈ ಕುರಿತು ನೆಲೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.