ಸಾಲಬಾಧೆ : ರೈತ ನೇಣಿಗೆ ಶರಣು

ಶಿವಮೊಗ್ಗ, ಏ. ೧೬- ಸಾಲಬಾಧೆಯಿಂದ ಬೇಸತ್ತು ರೈತರೋರ್ವರು ತಮ್ಮ ಜಮೀನಿನಲ್ಲಿಯೇ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚುರ್ಚಗುಂಡಿ ಗ್ರಾಮದಲ್ಲಿ ನಡೆದಿದೆ.
ಮಲ್ಲಿಕಾರ್ಜುನ (೩೫) ಆತ್ಮಹತ್ಯೆಗೆ ಶರಣಾದ ರೈತ ಎಂದು ಗುರುತಿಸಲಾಗಿದೆ. ವಿವಿಧ ಬ್ಯಾಂಕ್‌ಗಳಲ್ಲಿ ೪.೬೬ ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಖಾಸಗಿಯಾಗಿಯೂ ಸಾಲ ಪಡೆದಿದ್ದರು. ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ.
ಇದರಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.