ಸಾಲಬಾಧೆ: ನೇಣು ಹಾಕಿಕೊಂಡು ರೈತ ಆತ್ಮಹತ್ಯೆ

ಕಲಬುರಗಿ.ಜ.9:ಸಾಲಬಾಧೆಗೆ ಒಳಗಾಗಿ ರೈತನೋರ್ವ ತನ್ನ ಜಮೀನಿನಲ್ಲಿನ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಜೇರಟಗಿ ಗ್ರಾಮದಲ್ಲಿ ವರದಿಯಾಗಿದೆ. ಮೃತನಿಗೆ ಮಹಿಬೂಬಸಾಬ್ ಬಾಗವಾನ್ ಎಂದು ಗುರುತಿಸಲಾಗಿದೆ.
ಮಹಿಬೂಬಸಾಬ್ ಜೇರಟಗಿ ಸೀಮಾಂತರದಲ್ಲಿ ಸರ್ವೆ ನಂಬರ್ 81ರಲ್ಲಿ ಎರಡು ಎಕರೆ ಮೂರು ಗುಂಟೆ ಜಮೀನು ಹೊಂದಿದ್ದು, ಪತ್ನಿ ಹಸೀನಾ, ಸಮೀರ್, ಮಲಿಕ್ ಹಾಗೂ ಸೋಯಲ್ ಸೇರಿ ಮೂವರು ಪುತ್ರರು ಇದ್ದು, ಸಂಸಾರದ ಅಡಚಣೆಗಾಗಿ ಹಾಗೂ ಕೃಷಿ ಕೆಲಸಕ್ಕಾಗಿ ಜೇರಟಗಿ ಗ್ರಾಮದ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಲ್ಲಿ 2.50 ಲಕ್ಷ ರೂ.ಗಳು ಹಾಗೂ ಜೇರಟಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಒಂದು ಲಕ್ಷ ರೂ.ಗಳು ಹಾಗೂ ಖಾಸಗಿಯಾಗಿ ಊರವರ ಹತ್ತಿರ ಸುಮಾರು ಎರಡು ಲಕ್ಷ ರೂ.ಗಳ ಸಾಲವನ್ನು ಮಾಡಿಕೊಂಡಿದ್ದ ಎನ್ನಲಾಗಿದೆ.
ಈ ಬಾರಿ ಹೊಲದಲ್ಲಿ ತೊಗರಿ ಹಾಗೂ ಹತ್ತಿ ಬೆಳೆ ಹಾಕಿದ್ದು ಮಳೆ ಅತಿಯಾಗಿ ಆಗಿದ್ದರಿಂದ ಬೆಳೆ ನಾಶವಾಗಿದ್ದು, ಸಾಲ ತೀರಿಸುವ ಚಿಂತೆಗೆ ಒಳಗಾಗಿದ್ದ. ಮನೆಯವರು ಧೈರ್ಯ ಹೇಳಿದ್ದರೂ ಸಹ ಚಿಂತೆ ಮುಂದುವರೆಸಿದ್ದ. ಮಹಿಬೂಬಸಾಬ್ ಹೊಲಕ್ಕೆ ಹೋಗಿ ಬರುವೆನೆಂದು ಹೇಳಿ ಮನೆಯಿಂದ ಹೊರಹೋದವನು ಮರಳಿ ಬರಲಿಲ್ಲ. ಮನೆಯವರು ವಿಳಂಬವಾಗಿದ್ದರಿಂದ ಆತನ ಮೊಬೈಲ್‍ಗೆ ಕರೆ ಮಾಡಿದರು. ಮೊಬೈಲ್ ಕರೆ ಸ್ವೀಕರಿಸದೇ ಇದ್ದುದರಿಂದ ಮನೆಯವರು ಹೊಲಕ್ಕೆ ಹೋದಾಗ ಮಹಿಬೂಬಸಾಬ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ಮೃತನ ಪುತ್ರ ಮಲಿಕ್ ತಂದೆ ಮಹಿಬೂಬಸಾಬ್ ಬಾಗವಾನ್ ದೂರು ಸಲ್ಲಿಸಿದ್ದು, ನೆಲೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.