
ಮಂಗಳೂರು/ಮಂಡ್ಯ,ಮಾ.೩೧-ಎರಡು ಪ್ರತ್ಯೇಕ ಪ್ರಕರಣದಲ್ಲಿ ೬ ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ. ಸಾಲಬಾಧೆ ತಾಳದೆ ಒಂದೇ ಕುಟುಂಬದ ನಾಲ್ವರು ಮಂಗಳೂರಿನಲ್ಲಿ ನೇಣಿಗೆ ಶರಣಾಗಿದ್ದರೆ, ಮಂಡ್ಯದಲ್ಲಿ ಕೌಟುಂಬಿಕ ಕಲಹದಿಂದಿ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳೂರು ವರದಿ
ಮೈಸೂರು ಮೂಲದ ದಂಪತಿ ಮತ್ತು ಅವರ ಇಬ್ಬರು ಅವಳಿ ಹೆಣ್ಣು ಮಕ್ಕಳು, ಮಂಗಳೂರಿನ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೈಸೂರಿನ ವಿಜಯನಗರ ನಿವಾಸಿ ದೇವೇಂದ್ರ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಮಂಗಳೂರಿನ ಕೆಎಸ್ ರಾವ್ ರಸ್ತೆಯಲ್ಲಿರುವ ಕರುಣಾ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೈಸೂರಿನ ದೇವೇಂದ್ರ ಅವರು ಕುಟುಂಬ ಸಮೇತ ಲಾಡ್ಜ್‌ನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಲಾಡ್ಜ್ ಸಿಬ್ಬಂದಿ ಕೊಠಡಿಯನ್ನು ಸ್ವಚ್ಛಗೊಳಿಸಲು ಬಾಗಿಲು ತೆರೆದು ನೋಡಿದಾಗ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ದೇವೇಂದ್ರ (೪೮) ಅವರು ನೇಣು ಬಿಗಿದ ಸ್ಥಿತಿಯಲ್ಲಿದ್ದು, ಉಳಿದವರು ಮಲಗಿದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಶರಣಾಗಿರುವ ದೇವೇಂದ್ರ, ಪತ್ನಿ ನಿರ್ಮಲಾ (೪೫) ಮತ್ತು ಅವಳಿ ಮಕ್ಕಳಾದ ೯ ವರ್ಷದ ಚೈತ್ರ ಮತ್ತು ಚೈತನ್ಯ ಇವರಿಗೆ ವಿಷ ಉಣಿಸಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.ದೇವೇಂದ್ರ ಅವರು ಹೆಚ್ಚಿನ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗಿರಲಿಲ್ಲ. ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರು ಡೆತ್ ನೋಟ್‌ನ್ನು ಬರೆದಿದ್ದಾರೆ.ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಕುಲ್‌ದೀಪ್‌ಕುಮಾರ್ ಜೈನ್ ಭೇಟಿ ನೀಡಿದ್ದು, ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
ಮಂಡ್ಯ ವರದಿ
ಮಂಡ್ಯದಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗ ಪಟ್ಟಣ ತಾಲ್ಲೂಕಿನ ಕೆ. ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಕೆ.ಶೆಟ್ಟಿಹಳ್ಳಿಯ ಪುರುಷೋತ್ತಮ (೪೫), ವಿದ್ಯಾ(೩೨) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.ಕೌಟುಂಬಿಕ ಕಲಹದಿಂದ ಬೇಸತ್ತು ಪುರುಷೋತ್ತಮ ಹಾಗೂ ವಿದ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಪತಿ ಕೆಲಸಕ್ಕೆ ತೆರಳಿದಾಗ ಪತ್ನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ವಿಷಯ ತಿಳಿದು ಮನೆಗೆ ಬಂದ ಪತಿ ಮನೆ ಪಕ್ಕದ ಜಮೀನಿಗೆ ತೆರಳಿ ನೇಣಿಗೆ ಕೊರಳೊಡ್ಡಿದ್ದಾರೆ. ಮೃತ ಪುರುಷೋತ್ತಮ್ ಮೈಸೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು.ಮೃತ ದಂಪತಿಗೆ ೭ ಹಾಗೂ ೫ ವರ್ಷದ ಇಬ್ಬರು ಮಕ್ಕಳಿದ್ದಾರೆ.ತಂದೆ-ತಾಯಿ ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನ ನಡೆಸಿದ್ದಾರೆ. ಮೃತ ದೇಹಗಳನ್ನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.