ಸಾಲಬಾಧೆ: ಕಾಲುವೆಗೆ ಹಾರಿ ರೈತ ಆತ್ಮಹತ್ಯೆ

ಕಲಬುರಗಿ:ಮಾ.9: ಸಾಲಬಾಧೆಯಿಂದ ಬೇಸತ್ತು ರೈತನೋರ್ವ ಕಾಲುವೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಡ್ರಾಮಿ ತಾಲ್ಲೂಕಿನ ಕುರಳಗೇರಿ ಗ್ರಾಮದಲ್ಲಿ ವರದಿಯಾಗಿದೆ. ಮೃತನಿಗೆ ಅಶೋಕ್ ತಂದೆ ಬಸವರಾಜ್ ಹರವಾಳ್ (30) ಎಂದು ಗಉರುತಿಸಲಾಗಿದೆ.
ರೈತ ಅಶೋಕ್ ಹರವಾಳ್ ಅವರು ಕುರಳಗೇರಿ ಗ್ರಾಮದಲ್ಲಿ ಐದು ಎಕರೆ ಜಮೀನು ಹೊಂದಿದ್ದು, ಸಾಲ ಮಾಡಿ ಬೆಳೆದ ಬೆಳೆ ಸತತ ಮಳೆಯಿಂದ ಸಂಪೂರ್ಣ ಹಾಳಾಗಿದ್ದರಿಂದ ಸಾಲ ತೀರಿಸುವ ಚಿಂತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಗಿದೆ.
ರೈತ ಅಶೋಕ್ ಹರವಾಳ್ ಅವರು ಕಲಬುರ್ಗಿಯಲ್ಲಿನ ಎಚ್‍ಡಿಎಫ್‍ಸಿ ಬ್ಯಾಂಕ್‍ನಲ್ಲಿ 8 ಲಕ್ಷ ರೂ.ಗಳನ್ನು ಹಾಗೂ ಸೊಸೈಟಿಯಲ್ಲಿ 73 ಸಾವಿರ ರೂ.ಗಳನ್ನು ಹಾಗೂ ಖಾಸಗಿಯಾಗಿ ಸುಮಾರು ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಮೃತ ರೈತ ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗೂ ಪತ್ನಿಯನ್ನು ಬಿಟ್ಟು ಅಗಲಿದ್ದರಿಂದ ಕುಟುಂಬಸ್ಥರು ಯಜಮಾನನಿಗೆ ಕಳೆದುಕೊಂಡು ದು:ಖಕ್ಕೆ ಒಳಗಾಗಿದ್ದಾರೆ. ಈ ಕುರಿತು ಮೃತನ ಪತ್ನಿ ಶ್ರೀಮತಿ ಗೌರಮ್ಮ ಗಂಡ ಅಶೋಕ್ ಹರವಾಳ್ ಅವರು ದಊರು ಸಲ್ಲಿಸಿದ್ದು, ಈ ಕುರಿತು ಯಡ್ರಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.