ಸಾಲದ ಹೊರೆಗೆ ಕರ್ನಾಟಕ ರಾಜ್ಯ ದಿವಾಳಿ:ಪಿ. ರಾಜೀವ್ ಆರೋಪ

ಕಲಬುರಗಿ:ಫೆ.20: ಗ್ಯಾರಂಟಿ ಹೆಸರಿನ ಮೇಲೆ ರಾಜ್ಯದಲ್ಲ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಳೆದ ಎರಡು ಬಜೆಟ್‍ನಲ್ಲಿಯೇ ಇಡೀ ರಾಜ್ಯವನ್ನು ಖಾಸಗಿಯವರ ಸಾಲದ ಕೂಪಕ್ಕೆ ತಳ್ಳಿದೆ. ಮುಂದಿನ ಐದಾರು ವರ್ಷಗಳಲ್ಲಿ ಕರ್ನಾಟಕ ದಿವಾಳಿಯಾಗಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಪಿ. ರಾಜೀವ್ ಅವರು ಗಂಭೀರ ಆರೋಪ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ 85000 ಕೋಟಿ ರೂ.ಗಳ ಸಾಲ ಮಾಡಿದ್ದು, ಈಗ ಅದು 95ರಿಂದ 98000 ಕೋಟಿ ರೂ.ಗಳಿಗೆ ಹೆಚ್ಚಿದೆ. ಈ ವರ್ಷ 1.5000 ಕೋಟಿ ರೂ.ಗಳ ಸಾಲವಾಗಲಿದೆ ಎಂದು ಹೇಳಿದ್ದಾರೆ. ಇದು ಮಾರ್ಚ್ ಅಂತ್ಯಕ್ಕೆ 1,25000 ಕೋಟಿ ರೂ.ಗಳಾಗಲಿದೆ. ಇದರಿಂದಾಗಿ ಕಳೆದ ಎರಡು ವರ್ಷಗಳಲ್ಲಿ 2.25 ಕೋಟಿ ರೂ.ಗಳಾಗಲಿದೆ. ಆದಾಗ್ಯೂ, ಅಭಿವೃದ್ಧಿ ಶೂನ್ಯ. ಯಾವುದೇ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ಒಂದೇ ಒಂದು ಇಂಚು ರಸ್ತೆ ಮಾಡಿಲ್ಲ. ಹಾಗಾದರೆ ದುಡ್ಡು ಎಲ್ಲಿ ಹೋಗುತ್ತದೆ. ಈ ಸಾಲವನ್ನು ಯಾರು ತೀರಿಸುತ್ತಾರೆ?, ಖಾಸಗಿ ಬ್ಯಾಂಕಿನಿಂದ ಸಾಲ ಪಡೆದಿದ್ದಾರೆ. ಮುಂದಿನವರು ಸಾಲ ತೀರಿಸುತ್ತಾರೆ ಎಂದು ಹೇಳಿದರೆ ಸಾಲದು. ಕರ್ನಾಟಕದ ಸಾಲವನ್ನು ಮನ್ನಾ ಮಾಡಲು ಸಾಧ್ಯವೇ? ಎಂದು ಖಾರವಾಗಿ ಪ್ರಶ್ನಿಸಿದರು.
ಸಿದ್ಧರಾಮಯ್ಯ ಅವರ ಹೊಸ ಸರ್ಕಾರವು ಬಂದ ಮೇಲೆ ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದು ನೂತನ ಸರ್ಕಾರದ ಎರಡನೇ ಬಜೆಟ್ ಮಂಡಿಸಿದ್ದಾರೆ. ಅಭಿವೃದ್ಧಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ ಸತತವಾಗಿ ಎರಡನೇ ಬಾರಿಗೆ ರಾಜಸ್ವ ಕೊರತೆ ಬಜೆಟ್ ಮಂಡಿಸುವ ಮೂಲಕ ನಿರಂತರವಾಗಿ ಎರಡು ಬಾರಿ ಆರ್ಥಿಕ ಶಿಸ್ತು ಹಾಳು ಮಾಡಿದ ಅಪಕೀರ್ತಿಗೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರ ನಡೆಸುವುದಕ್ಕೆ ಎಷ್ಟು ಹಣ ಬೇಕಾಗುತ್ತದೆ ಅದನ್ನು ಹೊಂದಿಸಲು ಆಗದಂತಹ ಕೊರತೆ ಬಜೆಟ್‍ನ್ನು ಮಂಡಿಸಿದರು. ಆರ್ಥಿಕ ಅರಾಜಕತೆಗೆ ರಾಜ್ಯ ಒಳಗಾಗಿದೆ. ಆರ್ಥಿಕ ಎಡಬಿಡಂಬಿ ನಿರ್ಧಾರಗಳಿಂದ ಸಣ್ಣ ಕೈಗಾರಿಕೆಗಳು ಮುಚ್ಚಿಹೋಗಿವೆ ಎಂದು ಅವರು ದೂರಿದರು.
ಬಜೆಟ್‍ನಲ್ಲಿ 12ವರೆ ಸಾವಿರ ಕೋಟಿ ಕೊರತೆಯಾಗಿತ್ತು. (12528 ಕೋಟಿ), ಮೊನ್ನೆ ಬಜೆಟ್ ಮಂಡಿಸಿದಾಗ ಈಗ ಅದು 14000 ಕೋಟಿ ರೂ.ಗಳು ಎಂದು ಹೇಳಿದ್ದಾರೆ. ಲೆಕ್ಕ ಪರಿಶೋಧನೆ ಆದ ನಂತರ ಆ ಕುರಿತು ಗೊತ್ತಾಗುತ್ತದೆ. ಸುಮಾರು 15000 ಕೋಟಿ ರೂ.ಗಳು ಸರ್ಕಾರ ನಡೆಸುವುದಕ್ಕೆ ಹಣ ಇರಲಿಲ್ಲ. ಈ ಬಾರಿ ಬಜೆಟ್‍ನಲ್ಲಿ ಕಂದಾಯ ಕೊರತೆ 27,354 ಕೋಟಿ ರೂ.ಗಳಾಗಿದೆ. ಅಂದರೆ ಸಾಲ ಮಾಡಿ ಹಣ ಕೊಡಬೇಕು. 90 ಜನರಿಗೆ ಸಂಪುಟ ದರ್ಜೆ ಸ್ಥಾನ ಮಾನ ಕೊಟ್ಟಿದ್ದಾರೆ. ವಿವಿಧ ಸಲಹೆಗಾರರಿಗೆ, ಸೋಶಿಯಲ್ ಮೀಡಿಯಾ ಸಲಹೆಗಾರರಿಗೂ ಸಂಪುಟ ದರ್ಜೆ ಸ್ಥಾನಮಾನ ಕೊಟ್ಟಿದ್ದಾರೆ. ಸರ್ಕಾರ ನಡೆಸುವುದಕ್ಕೆ ದುಡ್ಡಿಲ್ಲ. ಸುಮಾರು 27,354 ಕೋಟಿ ರೂ.ಗಳ ರಾಜಸ್ವ ಕೊರತೆ ಇದೆ. ಇಂತಹ ಪರಿಸ್ಥಿತಿಯಲ್ಲಿ 90ಕ್ಕೂ ಹೆಚ್ಚು ಕಾರುಗಳನ್ನು ಖರೀದಿಸಿ ದುಂದು ವೆಚ್ಚ ಮಾಡಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.
ಒಂದೇ ಒಂದು ಇಂಚು ರಸ್ತೆ ಮಾಡಲಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಸಾಲ ತೀರಿಸಲು ಆಗಲ್ಲ. ಸಾಲ ಮನ್ನಾ ಮಾಡಲೂ ಸಾಧ್ಯವಿಲ್ಲ. ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಬಹುತೇಕ ನಾಲ್ಕೈದು ವರ್ಷಗಳಲ್ಲಿ ಸಾಲದ ಸುಳಿಯಿಂದ ಹೊರಬರದಂತಹ ಸ್ಥಿತಿಗೆ ತಲುಪಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಐದು ಗ್ಯಾರಂಟಿಗಳು ಘೋಷಿಸಿದರು. ಅಧಿಕಾರಕ್ಕೆ ಬಂದ ಮೇಲೆ ಆ ಗ್ಯಾರಂಟಿಗಳು ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ. ನುಡಿದಂತೆ ನಡೆದಿದ್ದೇವೆ ಎಂದು ಕೋಟಿಗಂಟಲೇ ಜಾಹೀರಾತು ಕೊಟ್ಟರೆ ಆಗುವುದಿಲ್ಲ. ಪ್ರತಿ ತಿಂಗಳು ಶೇಕಡಾ 25ರಷ್ಟು ಗ್ಯಾರಂಟಿ ಫಲಾನುಭವಿಗಳಿಗೆ ಕೊಡುತ್ತಿದ್ದೀರಿ. ಉಳಿದವರಿಗೆ ಮುಂದಿನ ತಿಂಗಳು ಎಂದು ಹೇಳುತ್ತಿದ್ದೀರಿ. ಇದು ಗ್ಯಾರಂಟಿಗಳ ಅನುಷ್ಠಾನ ಅಲ್ಲ. ಚುನಾವಣೆ ಸಂದರ್ಭದಲ್ಲಿ ಹೇಳಿದ ಹಾಗೆಯೇ ಯೋಜನೆಗಳನ್ನು ಮುಟ್ಟಿಸಬೇಕು. ಹಾಗೆಯೇ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ಮುಖಂಡರಾದ ಶ್ರೀಮತಿ ಶೋಭಾ ಬಾಣಿ, ಉಮೇಶ್ ಪಾಟೀಲ್, ರಾಘವೇಂದ್ರ ಕುಲಕರ್ಣಿ, ಬಾಬುರಾವ್ ಹಾಗರಗುಂಡಗಿ ಮುಂತಾದವರು ಉಪಸ್ಥಿತರಿದ್ದರು.