ಸಾಲದ ಸುಳಿಗೆ ಸಿಕ್ಕ ಅಮೆರಿಕ

ವಾಷಿಂಗ್ಟನ್, ಮೇ ೨೦- ವಿಶ್ವದ ಅತೀ ದೊಡ್ಡ ಆರ್ಥಿಕತೆಯಾಗಿರುವ ಅಮೆರಿಕಾ ಸದ್ಯ ಸಾಲದಲ್ಲಿ ಸುಳಿಯಲ್ಲಿ ಸಿಲುಕಿಕೊಂಡಿದೆ. ಅದೂ ಅಲ್ಲದೆ ಅಮೆರಿಕಾದ ಫೆಡರಲ್ ಸರ್ಕಾರ ತನ್ನ ಸಾಲದ ಮಿತಿಯನ್ನು ೩೧ ಟ್ರಿಲಿಯನ್ ಡಾಲರ್‌ಗೆ ಏರಿಸುವ ಕುರಿತು ಸದ್ಯ ಚಿಂತನೆ ನಡೆಸುತ್ತಿದೆ. ಈ ನಡುವೆ ಇದೇ ವಿಚಾರ ಚರ್ಚಿಸುವ ಸಲುವಾಗಿ ಶ್ವೇತಭವನ ಮತ್ತು ರಿಪಬ್ಲಿಕನ್ ಕಾಂಗ್ರೆಸ್ ಸಮಾಲೋಚಕರ ನಡುವಿನ ಎರಡನೇ ಸಭೆಯಲ್ಲಿ ಕೂಡ ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಸಹಜವಾಗಿಯೇ ಇದು ಯುಎಸ್‌ಗೆ ಹಿನ್ನಡೆ ತಂದಂತಾಗಿದೆ.
ಸದ್ಯ ಅಮೆರಿಕಾವು ಜೂನ್ ೧ರ ಒಳಗೆ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ಇದರೊಳಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲತೆ ಕಂಡರೆ ಅಮೆರಿಕಾ ಐತಿಹಾಸಿಕ ಡಿಫಾಲ್ಟ್‌ನತ್ತ ಸಾಗಲಿದೆ ಎನ್ನಲಾಗಿದೆ. ಆದರೆ ಇದರ ಸಾಧ್ಯತೆ ತೀರಾ ಕಡಿಮೆ ಇದ್ದು, ಈ ಹಿನ್ನೆಲೆಯಲ್ಲಿ ಸಾಲದ ಮಿತಿಯನ್ನು ೩೧ ಟ್ರಿಲಿಯನ್ ಡಾಲರ್‌ಗೆ ಏರಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ನಡುವೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ಕೆವಿನ್ ಮೆಕಾರ್ಥಿ ಅವರು ಒಪ್ಪಂದ ನಡೆಯಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನು ಅಮೆರಿಕಾದ ಕ್ಯಾಪಿಟೊಲ್‌ನಲ್ಲಿ ಶ್ವೇತಭವನದ ಅಧಿಕಾರಿಗಳ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಅಮೆರಿಕಾದ ರಿಪಬ್ಲಿಕನ್ ಪಕ್ಷದ ಸದಸ್ಯ ಗ್ಯಾರೆಟ್ ಗ್ರೇವ್ಸ್, ಸದ್ಯ ನಮ್ಮ ಹಣಕಾಸಿನ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಹಾಗೂ ಮುಂದೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಪ್ರಾಮಾಣಿಕವಾಗಿ ಚರ್ಚೆ ನಡೆಸಲಾಗಿದೆ. ಮುಂದಿನ ಮಾತುಕತೆ ನಡೆಯುವ ದಿನಾಂಕದ ಬಗ್ಗೆ ಘೋಷಣೆಯಾಗಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಎರಡನೇ ರಿಪಬ್ಲಿಕನ್ ಸಮಾಲೋಚಕ, ಪ್ರತಿನಿಧಿ ಪ್ಯಾಟ್ರಿಕ್ ಮೆಕ್‌ಹೆನ್ರಿ, ಈ ವಾರಾಂತ್ಯದಲ್ಲಿ ಒಪ್ಪಂದವನ್ನು ತಲುಪುವ ಮೆಕಾರ್ಥಿ ಅವರ ಗುರಿಯನ್ನು ಎರಡು ಕಡೆಯವರು ಪೂರೈಸಬಹುದೆಂಬ ವಿಶ್ವಾಸವಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಸದ್ಯಕ್ಕೆ ಈ ಪ್ರಹಸನ ಮುಕ್ತಾಯಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗಿದೆ. ಸದ್ಯ ಕಾಂಗ್ರೆಸ್ ಮತ್ತು ಶ್ವೇತಭವನವು ಜೂನ್ ೧ ರ ಡೆಡ್‌ಲೈನ್ ವಿರುದ್ಧ ಸ್ಪರ್ಧಿಸುತ್ತಿವೆ. ಅತ್ತ ಅಮೆರಿಕಾದ ಖಜಾನೆ ಇಲಾಖೆಯು ಅದರ ಕೆಲವು ಸಾಲ ಪಾವತಿಗಳನ್ನು ಮಾಡಲು ಹೆಣಗಾಡುತ್ತಿದೆ. ಒಂದು ವೇಳೆ ಇದು ನಡೆದರೆ ಇದೇ ಮೊದಲ ಬಾರಿಗೆ ಅಮೆರಿಕಾ ಡಿಫಾಲ್ಟ್‌ಗೆ ಸಿಲುಕಲಿದೆ.