ಸಾಲದ ಸದ್ಬಳಕೆಯಿಂದ ಆರ್ಥಿಕ ಪ್ರಗತಿ: ನ್ಯಾ.ಸತ್ಯನಾರಾಯಣಾಚಾರ್ಯ

ಬೀದರ:ಎ.16: ಸಾಲ ಅಥವಾ ಅನುದಾನದ ಸದ್ಬಳಿಕೆಯಿಂದ ಕೌಟೊಂಬಿಕ ಆರ್ಥಿಕ ಪ್ರಗತಿ ಸಾಧ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಕಾಡಲೂರು ಸತ್ಯನಾರಾಯಣಾಚಾರ್ಯ ಅಭಿಪ್ರಾಯ ಪಟ್ಟರು.

ಗುರುವಾರ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಅಲೆಮಾರಿ/ಅರೇ ಅಲೆಮಾರಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮೂದಾಯಗಳ ಅಭಿವೃದ್ಧಿ ಕೋಶಗಳ ಸಹಯೋಗದಲ್ಲಿ ಪರಿವರ್ತಿತ ಮಾಸ ಮಾರ್ಚ್ ಹಾಗೂ ಏಪ್ರಿಲ್ ತಿಂಗಳುಗಳ ಸ್ವಾವಲಂಬನೆಯ ಹಾದಿಯಲ್ಲಿ ಅಭಿವೃದ್ಧಿ ಯೋಜನೆಗಳ ಅಡಿ ಆಯ್ದ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿದರು.

ಇಂದು ಹಲವರು ಸಾಲ ಪಡೆದು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದೇ ಹೆಚ್ಚು. ಮಕ್ಕಳ ಹಟಮಾರಿತನಕ್ಕೆ ಮಣಿದು ಬೈಕ್ ಕೊಡಿಸಲಿಕ್ಕೊ, ಮೊಬೈಲ್ ಕೊಡಿಸಲಿಕ್ಕೊ ಅಥವಾ ಮಕ್ಕಳ ಮದುವೆಗೆಂದು ಬಳಿಸುತ್ತಿರುವರು. ಉದ್ಯೋಗಕ್ಕಾಗಿ ಪಡೆದ ಸಾಲ ಬೇರೊಂದು ಉದ್ದೇಶಕ್ಕೆ ಬಳಿಸಿಕೊಳ್ಳುವುದು ಅಪರಾಧ. ಇದರಿಂದ ಆರ್ಥಿಕ ಹಿಂಜರಿತದ ಜೊತೆಗೆ ಸರ್ಕಾರದ ಯೋಜನೆಗಳು ಪೋಲಾಗುವವು. ಕೆಲವರಂತೂ ಸಾಲ ಪಡೆಯುವುದು ಕೇವಲ ಸಬ್ಸಿಡಿ ಪಡೆಯಲಿಕ್ಕೆ ಮಾತ್ರ ಸೀಮಿತರಾಗಿತ್ತಾರೆ. ಇನ್ನು ಕೆಲವರು ಪಡೆದ ಸಾಲ ಮರುಪಾವತಿಸದೇ ಸಾಲ ಮನ್ನಾದ ಹಾದಿ ನೋಡುತ್ತ ಕಾಲ ಕಳೆಯುತ್ತಾರೆ. ಇದು ದೊಡ್ಡ ಅಪರಾಧ. ಇಂಥ ದುಷ್ಟ ಪ್ರವರ್ತಿಯಿಂದ ದೂರ ಸರಿದು ಸಾಲ ಪಡೆದ ಫಲಾನುಭವಿಗಳು ಸಾಲ ಮರುಪಾವತಿ ಮಾಡಿ ಸರ್ಕಾರದ ಮಟ್ಟದಲ್ಲಿ ಒಳ್ಳೆಯ ಫಲಾನುಭವಿ ಎನಿಸಿಕೊಳ್ಳುವುದಲ್ಲದೇ ಕುಟಂಬದ ಆದಾಯ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಕರೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಸಿದ್ರಾಮ ಟಿ.ಪಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಯಾವ ಉದ್ದೇಶಕ್ಕಾಗಿ ಸಾಲ ಪಡೆದಿರುತ್ತಿರಿ ಅದಕ್ಕಾಗಿ ಬಳಿಸುವುದು ಯೋಗ್ಯ. ನಮ್ಮಲ್ಲಿ ಆತ್ಮಸ್ಥೈರ್ಯ ಬರಬೇಕಾದರೆ ಸದಾ ಒಳ್ಳೆಯದನ್ನೇ ಚಿಂತಿಸಬೇಕು. ನಮ್ಮನ್ನು ನಾವು ಯಾವತ್ತೂ ಕಡಿಮೆ ಇದ್ದೇವೆ ಎಂದು ಭಾವಿಸಕೂಡದು. ಸರ್ಕಾರದ ಯೋಜನೆಗಳು ಇರುವುದು ದುರ್ಬಲ ವರ್ಗಗಳ ಏಳಿಗೆಗಾಗಿ ಎಂಬುದನ್ನು ಅರಿತು ಅವುಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ಕೊಟ್ಟರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಗದೀಶ ಜಗತಾಪ ಮಾತನಾಡಿ, ಹಿಂದೆ ನಮ್ಮ ಪೂರ್ವಜರಿಗೆ ಯಾವ ಸೌಲತ್ತುಗಳು ಇರಲಿಲ್ಲ. ಆದರೆ ಅವರಲ್ಲಿ ಬದುಕುವ ಕೌಶಲ್ಯ ಇತ್ತು. ಇಂದು ನಮ್ಮ ಮನಸ್ಸು ಹಾಗೂ ವೃತ್ತಿಯಲ್ಲಿ ಬದಲಾವಣೆಯಾಗಿರುವುದರಿಂದ ಎಷ್ಟು ಸಿಕ್ಕರೂ ಇನ್ನು ಹಪಾಹಪಿತನ ನಮ್ಮನ್ನು ನಿರಂತರವಾಗಿ ಕಾಡುತ್ತಲ್ಲೇ ಇದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮಗಳ ವತಿಯಿಂದ ಸ್ವಯಂ ಉದ್ಯೋಗ ನೇರ ಸಾಲ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಗಂಗಾ ಕಲ್ಯಾಣ, ಭೂ ಒಡೆತನ, ಮೇಕ್ರೋ ಕ್ರೇಡಿಟ್ ಸೇರಿದಂತೆ ವಿವಿಧ ಯೋಜನೆಗಳಡಿ ಆಯ್ದ ಫಲಾನುಭವಿಗಳಿಗೆ ಸಾಲದ ಚೆಕ್‍ಗಳು ವಿತರಿಸಲಾಯಿತು.

ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸುರೇಶ ನಾಯಕ ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಸಾಲದ ಚೆಕ್‍ಗಳು ಸ್ವೀಕರಿಸಿದ ಫಲಾನುಭವಿಗಳಾದ ನೌಬಾದ್‍ನ ವಿಜಯಲಕ್ಷ್ಮೀ ಗಂಡ ರಾಜಕುಮಾರ, ತೇಜಮ್ಮ ಗಂಡ ಬಸವಣಪ್ಪ, ರಾಜಗೊಂಡ ಕಾಲೋನಿಯ ಶಾಂತಾಬಾಯಿ ಗಬ್ಬರ್, ಹರೀಶ ತಂದೆ ಓನು, ಬೆಳಕುಂದಾದ ಶಶಿಕಲಾ ಗಂಡ ಸುರೇಶ ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಫಲಾನುಭವಿಗಳಿಗೆ ಈ ಸಂದರ್ಭದಲ್ಲಿ ಸಾಲದ ಚೆಕ್‍ಗಳು ವಿತರಿಸಲಾಯಿತು.

ಸಮಾರಂಭದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಆರ್.ಸುರೇಶ, ಕಚೇರಿ ಆಧಿಕ್ಷಕ ಅರುಣಕುಮಾರ, ತಾಲೂಕು ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ರಾಥೋಡ್, ಸಯ್ಯದ್ ಅಕ್ಬರ್, ರಾಜಕುಮಾರ, ಸಿಬ್ಬಂದಿಗಳಾದ ವಿನಾಯಕ, ಮಹೇಶ, ರೇವಣಸಿದ್ದ, ಬಸವರಾಜ, ಶರಣಪ್ಪ ಸೇರಿದಂತೆ ವಾಲ್ಮಿಕಿ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಫಲಾನುಭವಿಗಳು, ಅವರ ಸಂಬಂಧಿಕರು ಉಪಸ್ಥಿತರಿದ್ದರು.