ಮೈಸೂರು,ಮೇ.೨೯- ಸಾಲಬಾಧೆ ತಾಳಲಾರದೆ ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹುಣಸೂರು ತಾಲ್ಲೂಕಿನ ಶ್ಯಾನಭೋಗನಹಳ್ಳಿಯ ಸುರೇಶ್ (೫೮) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಎರಡು ಎಕರೆ ಜಮೀನು ಹೊಂದಿದ್ದ ರೈತರಾಗಿದ್ದ ಇವರು ಬ್ಯಾಂಕ್, ಸೊಸೈಟಿ ಸೇರಿ ೭ ಲಕ್ಷ ರೂ ಸಾಲ ಮಾಡಿದ್ದರು. ಬೆಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೇ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸೂರು ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮದ ರಾಜಶೆಟ್ಟಿ (೭೮) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೫ ಎಕರೆ ಜಮೀನು ಹೊಂದಿದ್ದ ರಾಜಶೆಟ್ಟಿ ತಂಬಾಕು, ರಾಗಿ ಬೆಳೆ ಬೆಳೆದಿದ್ದರು.
ಬ್ಯಾಂಕ್, ಸೊಸೈಟಿ, ಮಹಿಳಾ ಸಂಘ, ಕೈ ಸಾಲ ಸೇರಿ ಸುಮಾರು ೮ ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಹೆಚ್ಚಾಗಿದ್ದ ಬಡ್ಡಿ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಯಕ್ಕೆ ಬಿದ್ದು ಸಾವು:
ಕಟ್ಟಡಕ್ಕಾಗಿ ತೋಡಲಾದ ತಳಪಾಯದ ಗುಂಡಿಯಲ್ಲಿ ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಹೆಬ್ಬಾಳು ಕೈಗಾರಿಕಾ ಪ್ರದೇಶದ ಸೆನ್ ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಕ್ರಿಸ್ಟೋ ಚೆರಿಯನ್ (೩೪) ಮೃತಪಟ್ಟವರು.
ವಿಜಯನಗರ ಮೊದಲ ಹಂತದ ಟ್ಯಾಂಕ್ ಬಳಿ ತೋಡಲಾಗಿದ್ದ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಮದುವೆಯಾಗಿದ್ದ ಕ್ರಿಸ್ಟೋ ಮಾನಸಿಕವಾಗಿ ಖಿನ್ನರಾಗಿದ್ದರು ಎನ್ನಲಾಗಿದೆ. ವಿಜಯನಗರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.