ಸಾಲದ ಕಂತು ಪಾವತಿಗೆ ಕಾಲಾವಕಾಶ ನೀಡಲು ಮನವಿ

ದಾವಣಗೆರೆ.ಏ.೩೦; ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಸ್ವಸಹಾಯ ಸಂಘ ಹಾಗೂ ಮೈಕ್ರೋ ಫೈನಾನ್ಸ್ ಸಾಲದ ಕಂತು, ಬಡ್ಡಿ ಪಾವತಿಸಲು ಕಾಲಾವಕಾಶ ಕೊಡುವಂತೆ ಸರ್ಕಾರ ನಿರ್ದೇಶನ ನೀಡಬೇಕೆಂದು ಸುವರ್ಣ ಕರ್ನಾಟಕ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್.ಸಂತೋಷ ಕುಮಾರ ಒತ್ತಾಯಿಸಿದ್ದಾರೆ. ಕೊರೋನಾ 2ನೇ ಅಲೆ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಘೋಷಿಸಿರುವುದು ಸ್ವಾಗತಾರ್ಹ. ಆದರೆ ಕರ್ಫ್ಯೂ ಕಾರಣಕ್ಕೆ ಬಡ, ಮಧ್ಯಮ ವರ್ಗದ ಜನರು ಮನೆಯಲ್ಲೇ ಕುಳಿತಿದ್ದು, ಆದಾಯವಿಲ್ಲದೆ ಜೀವನ ಮಾಡುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಸ್ವಹಾಯ ಸಂಘ, ಮೈಕ್ರೋ ಫೈನಾನ್ಸ್ಗಳು ಸಾಲದ ಕಂತು, ಬಡ್ಡಿ ಪಾವತಿಸುವಂತೆ ಜನರನ್ನು ಪೀಡಿಸುತ್ತಿರುವ ದೂರುಗಳು ವ್ಯಕ್ತವಾಗಿವೆ. ಸರ್ಕಾರ ಕೂಡಲೇ ಇದಕ್ಕೆ ಕಡಿವಾಣ ಹಾಕಿ, ಲಾಕ್‌ಡೌನ್ ಪರಿಸ್ಥಿತಿ ತಿಳಿಗೊಳ್ಳುವವರೆಗೆ ಬಡಜನತೆಗೆ ಸಮಯಾವಕಾಶ ಕೊಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಕಳೆದ ವರ್ಷ ಲಾಕ್‌ಡೌನ್ ಮಾಡಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಾಲ ಮರುಪಾವತಿಗೆ ಒತ್ತಡ ಹೇರದಂತೆ ಬ್ಯಾಂಕುಗಳಿಗೆ ಸೂಚಿಸಿತ್ತು. ಆದರೆ ನಂತರದ ದಿನಗಳಲ್ಲಿ ಬ್ಯಾಂಕುಗಳು ಸಾಲಗಾರರಿಂದ ಬಡ್ಡಿ, ಚಕ್ರಬಡ್ಡಿ ವಸೂಲು ಮಾಡಿದ್ದವು. ಹೀಗಾಗಿ ಮೈಕ್ರೋ ಫೈನಾನ್ಸ್, ಸ್ವಸಹಾಯ ಸಂಘಗಳು ಸಾಲ ಮರುಪಾವತಿಗೆ ಕಾಲಾವಕಾಶ ನೀಡಿದರೂ, ಆನಂತರದಲ್ಲಿ ಬಡ್ಡಿ, ಚಕ್ರಬಡ್ಡಿ ವಿಧಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಜನತಾ ಕರ್ಫ್ಯೂ ಹೆಸರಿನಲ್ಲಿ ಲಾಕ್‌ಡೌನ್ ಹೇರಿರುವ ಸರ್ಕಾರವು ಬಡಜನರ ಜೀವನೋಪಾಯಕ್ಕೆ ನೆರವಾಗುವಂತೆ ಅಗತ್ಯ ಪರಿಹಾರ ಧನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.