ಸಾಲಕ್ಕೆ ಹೆದರಿ ಕುಟುಂಬದ ಐವರ ಕಣ್ಮರೆ: ಆತ್ಮಹತ್ಯೆ ಶಂಕೆ

ಸಂಜೆವಾಣಿ ನ್ಯೂಸ್
ಮೈಸೂರು: ಜ.29:- ಸಾಲಗಾರರ ಕಾಟಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ಕಳುಹಿಸಿ 3 ವರ್ಷದ ಮಗು ಸೇರಿ ಐದು ಮಂದಿಯ ಇಡೀ ಕುಟುಂಬ ನಾಪತ್ತೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಕೆ.ಜಿ.ಕೊಪ್ಪಲಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೆ.ಜಿ.ಕೊಪ್ಪಲಿನ ಮಹೇಶ್(35),ಈತನ ಪತ್ನಿ ಭವಾನಿ(28),ಪುತ್ರಿ ಪ್ರೇಕ್ಷಾ(3) ಇವರ ತಂದೆ ಮಹದೇವಪ್ಪ(65) ಹಾಗೂ ತಾಯಿ ಸುಮಿತ್ರ (55) ನಾಪತ್ತೆಯಾದವರಾಗಿದ್ದು, ಇಡೀ ಕುಟುಂಬದ 8 ದಿನ ಕಳೆದರೂ ಪತ್ತೆ ಆಗಿಲ್ಲ ಎನ್ನಲಾಗಿದೆ. ಈ ಸಂಬಂಧ ಭವಾನಿ ಸಹೋದರ ಜಗದೀಶ್ ಸರಸ್ವತಿಪುರಂ ಪೆÇಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಮಾರುಕಟ್ಟೆ ವ್ಯವಹಾರ ನಡೆಸುತ್ತಿದ್ದ ಮಹೇಶ್ ವೀರೇಶ್ ಎಂಬುವರ ವ್ಯವಹಾರಕ್ಕೆ ಸಾಥ್ ನೀಡಿದ್ದಾರೆ.
ಸ್ನೇಹಿತರಂತೆ ಪರಿಚಯ ಹೇಳಿಕೊಂಡು ವ್ಯಕ್ತಿ ಯೋರ್ವ 30 ರಿಂದ 35 ಲಕ್ಷ ಸಾಲ ಪಡೆದಿದ್ದಾನೆ. ವ್ಯವಹಾರದಲ್ಲಿ ನಷ್ಟವಾದ ಕಾರಣ ರಾತ್ರೋ ರಾತ್ರಿ ಓಡಿ ಹೋಗಿದ್ದಾನೆ. ಸ್ನೇಹಿತನಿಗೆ ಸಾಲ ನೀಡಿದ ಮಂದಿ ಮಹೇಶ್ ಮೇಲೆ ಒತ್ತಡ ಹೇರಿದ್ದಾರೆ. ಪ್ರಾರಂಭದಲ್ಲಿ 2 ಲಕ್ಷಕ್ಕೆ ಗ್ಯಾರಂಟಿ ಕೊಟ್ಟ ಮಹೇಶ್ ನಂತರ ಸಾಲದ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ಸಾಲಗಾರರ ನಿರಂತರ ಒತ್ತಡಕ್ಕೆ ಹೆದರಿದ ಮಹೇಶ್ ತಮ್ಮ ಸ್ನೇಹಿತರಾದ ದರ್ಶನ್ ಎಂಬುವರ ಮೊಬೈಲ್ ಗೆ ವಾಯ್ಸ್ ಮೆಸೇಜ್ ಮಾಡಿದ್ದಾರೆ.
ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿ ಸಾಲ ಹಿಂದಿರುಗಿಸಲಾಗಿಲ್ಲ. ಸಾಲಗಾರರು ನನಗೆ ತೊಂದರೆ ಕೊಡುತ್ತಿದ್ದಾರೆ. ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಸಾಲಗಾರರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ನಾವು ಕೆರೆ ಅಥವಾ ಭಾವಿಗೆ ಬೀಳುತ್ತೇವೆ. ಒಂದು ವೇಳೆ ಮೃತದೇಹ ದೊರೆತರೆ ಅಂತ್ಯಕ್ರಿಯೆ ಮಾಡಿ. ಅವರನ್ನಂತೂ ಬಿಡಬೇಡಿ ಎಂದು ರಂಜಿತಾ, ದಿನೇಶ್, ಚಂದ್ರು ಹಾಗೂ ನೇತ್ರ ಎಂಬುವರ ಹೆಸರನ್ನ ವಾಯ್ಸ್ ಮೆಸೇಜ್ ನಲ್ಲಿ ಉಲ್ಲೇಖಿಸಿದ್ದಾರೆ. ಇನ್ನೂ ನಾಪತ್ತೆಯಾದ ನೇತ್ರ ಅವರ ಸಹೋದರ ಜಗದೀಶ್ ಜ.20 ರಂದು ಕಾಣೆಯಾದ ಬಗ್ಗೆ ದೂರು ನೀಡಿದ್ದು, ಇದುವರೆಗೂ ಪತ್ತೆಯಾಗಿರುವುದಿಲ್ಲ.
ಸರಸ್ವತಿ ಪುರಂ ಠಾಣೆ ಪೆÇಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿದೆ. ಇವರ ಪತ್ತೆಗೆ ಪೆÇಲೀಸರು ಶ್ರಮಿಸುತ್ತಿದ್ದಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಹತ್ತಿರದ ಪೆÇಲೀಸ್ ಠಾಣೆಗಾಗಲಿ ಅಥವಾ ಸರಸ್ವತಿಪುರಂ ಪೆÇಲೀಸ್ ಠಾಣೆಗೆ ಮಾಹಿತಿ ತಿಳಿಸುವಂತೆ ಕೋರಿದ್ದಾರೆ.
ಆ ಮೂಲಕ ಕೈ ಸಾಲಕ್ಕೆ ಇಡೀ ಕುಟುಂಬವೇ ಕಣ್ಮರೆಯಾಗಿರುವ ಘಟನೆ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ.