ಸಾಲಕ್ಕೆ ಸಹಾಯಧನ ಜಮಾ ಬೇಡ:ಬಿಎಸ್‌ವೈ

ಬೆಂಗಳೂರು,ಜೂ.೮- ಲಾಕ್‌ಡೌನ್ ಬಾಧಿತರಿಗೆ ಸರ್ಕಾರ ಪ್ರಕಟಿಸಿರುವ ಕೊರೊನಾ ಪ್ಯಾಕೇಜ್ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನೀಡಿರುವ ೨ ಸಾವಿರ ರೂ.ಗಳ ಸಹಾಯ ಧನವನ್ನು ಅವರ ಸಾಲಕ್ಕೆ ಹೊಂದಾಣಿಕೆ ಮಾಡದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬ್ಯಾಂಕುಗಳಿಗೆ ಸೂಚನೆ ನೀಡಿದರು.
ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣಾದಲ್ಲಿಂದು ನೋಂದಾಯಿತ ಬೀದಿ ಬದಿ ವ್ಯಾಪಾರಿಗಳಿಗೆ ಕೋವಿಡ್-೧೯ರ ೨ನೇ ಅಲೆಯ ಪರಿಹಾರ ಪ್ಯಾಕೇಜ್ ನೀಡಿ ಘೋಷಿಸಿರುವ ೨ ಸಾವಿರ ರೂ.ಗಳ ಸಹಾಯ ಧನವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಕೆಲಸವನ್ನು ಮಾಡಿದ್ದೇವೆ. ಅದರಂತೆ ೨,೧೬,೪೩೯ ಫಲಾನುಭವಿಗಳ ಪೈಕಿ ಆಧಾರ್ ಜೋಡಣೆಯಾಗಿರುವ ೧,೯೧,೬೮೪ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ ೨ ಸಾವಿರ ರೂ.ನಂತೆ ಒಟ್ಟು ೩೮.೩೩ ಕೋಟಿ ರೂ.ಗಳನ್ನು ವರ್ಗಾಯಿಸಲಾಗುತ್ತಿದೆ ಎಂದರು. ಉಳಿದಂತೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿ ಸಹಾಯಧನವನ್ನು ತ್ವರಿತವಾಗಿ ಬಿಡುಗಡೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಈ ಕೊರೊನಾ ಪ್ಯಾಕೇಜ್ ಅಡಿ ಬಿಡುಗಡೆ ಮಾಡಿರುವ ಸಹಾಯ ಧನವನ್ನು ವ್ಯಾಪಾರಿಗಳ ಯಾವುದೇ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳದೆ ೨ ಸಾವಿರ ರೂ.ಗಳನ್ನು ಫಲಾನುಭವಿಗಳಿಗೆ ನೀಡಬೇಕು ಎಂದು ಬ್ಯಾಂಕುಗಳಿಗೂ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕೋವಿಡ್ ಸೋಂಕಿನ ೨ನೇ ಅಲೆಯಿಂದ ತೊಂದರೆಗೊಳಗಾದವರಿಗೆ ೧,೭೫೦ ಕೋಟಿ ರೂ.ಗಳಿಗೂ ಹೆಚ್ಚಿನ ಪ್ಯಾಕೇಜ್ ಘೋಷಿಸಲಾಗಿದೆ. ಈಗಾಗಲೇ ಹಲವು ಶ್ರಮಿಕ ವರ್ಗದವರಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥ ನಾರಾಯಣ ಅವರು ಬೀದಿ ಬದಿ ವ್ಯಾಪಾರಿಗಳಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಯಾವುದೇ ಅರ್ಜಿಗಳನ್ನು ಪಡೆಯದೇ ಕೊರೊನಾ ಪ್ಯಾಕೇಜ್ ಪರಿಹಾರವನ್ನು ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳಾದ ಡಾ. ಇ.ವಿ. ರಮಣರೆಡ್ಡಿ, ರಾಜೀವ್ ಚಾವ್ಲಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.