ಸಾರ್ವತ್ರಿಕ ವಿಧಾನಸಭಾ ಚುನಾವಣೆಜಿಲ್ಲೆಯಲ್ಲಿ 24 ಚೆಕ್‍ಪೋಸ್ಟ್ ಭದ್ರತೆ


ಬಳ್ಳಾರಿ,ಏ,1-  2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣೆಯ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗೆ ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ 24 ಚೆಕ್‍ಪೋಸ್ಟ್ ಸ್ಥಾಪಿಸಿ, ನೇರ ದೃಶ್ಯಾವಳಿ ಸೆರಿಹಿಡಿಯಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಮತದಾರರಿಗೆ ಆಮಿಷ ಒಡ್ಡಲು ಮತ್ತು ಅನಧಿಕೃತವಾಗಿ ವಸ್ತುಗಳನ್ನು ನೀಡುವುದು. ದಾಖಲೆಯಿಲ್ಲದ ಹಣವನ್ನು ಸಾಗಾಣೆ ಮಾಡುವುದು ಸೇರಿದಂತೆ ಆಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡದೇ ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಹದ್ದಿನ ಕಣ್ಣಿಡಲಾಗಿದೆ. ಇದರ ಭಾಗವಾಗಿ ಬಳ್ಳಾರಿ ಜಿಲ್ಲೆ ಅಂತರ್‍ರಾಜ್ಯ ಗಡಿ ಪ್ರದೇಶವನ್ನು ಹೊಂದಿದ್ದು, ಅಂತರ್‍ಜಿಲ್ಲಾ ಗಡಿಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ತೀವ್ರ ಬಿಗಿಯಾದ ಕ್ರಮವನ್ನು ಕೈಗೊಂಡಿದೆ ಅಲ್ಲದೇ, ಎಚ್ಚರಿಕೆಯನ್ನು ವಹಿಸಲಾಗಿದೆ.
ಚುನಾವಣೆ ಅಕ್ರಮಗಳ ಮೇಲೆ ಕಣ್ಗಾವಲು ಇಡಲು ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ, ಅಲ್ಲಿ ವಿವಿಧ ತಂಡಗಳನ್ನು ನೇಮಿಸಲಾಗಿದೆ. ಇಲ್ಲಿನ ಕಾರ್ಯಚಟುವಟಿಕೆಗಳ ನೇರ ದೃಶ್ಯಾವಳಿಗಳನ್ನು ಸೆರೆಹಿಡಿಯಲು ಸಿಸಿ ಕ್ಯಾಮೆರಾ ಆಳವಡಿಸಿ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ವೀಕ್ಷಣೆ ಮಾಡುವುದು ಆಪ್ ಮೂಲಕವೂ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು, ಎಂಸಿಸಿ ತಂಡದ ಮುಖ್ಯಸ್ಥರು ವೀಕ್ಷಣೆ ಮಾಡಲಿದ್ದಾರೆ.
ಜಿಲ್ಲೆಯಲ್ಲಿ 8, ಅಂತರ್‍ಜಿಲ್ಲೆ ಗಡಿಯಲ್ಲಿ 4 ಮತ್ತು ಅಂತರರಾಜ್ಯ ಆಂಧ್ರಪ್ರದೇಶ ಗಡಿಭಾಗದಲ್ಲಿ 12 ಸೇರಿ 24 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
5 ಕ್ಷೇತ್ರದಲ್ಲಿ 24 ಚೆಕ್‍ಪೋಸ್ಟ್ ಸ್ಥಾಪನೆ: ಜಿಲ್ಲೆಯಲ್ಲಿ ಒಟ್ಟು 5 ಮತಕ್ಷೇತ್ರಗಳಿಗೆ ಜಿಲ್ಲೆಯಾದ್ಯಂತ ಒಟ್ಟು 24 ಚೆಕ್‍ಪೋಸ್ಟ್ ಸ್ಥಾಪಿಸಲಾಗಿದೆ. ಪ್ರತಿ ಚೆಕ್‍ಪೋಸ್ಟ್ ಲ್ಲಿ 3 ಎಸ್‍ಎಸ್‍ಟಿ ಅಧಿಕಾರಿಗಳು ಹಾಗೂ ಪೋಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮತಕ್ಷೇತ್ರಕ್ಕೆ ಫ್ಲೈಯಿಂಗ್ ಸ್ಕ್ವ್ಯಾಡ್ ಮತ್ತು ವಿಡಿಯೋ ಕಣ್ಗಾವಲು ತಂಡಗಳನ್ನು ನೇಮಕ ಮಾಡಲಾಗಿದೆ.
ಕ್ಷೇತ್ರವಾರು ಚೆಕ್‍ಪೋಸ್ಟ್ ಸ್ಥಾಪನೆ:
*ಕಂಪ್ಲಿ ವಿಧಾನಸಭಾ ಕ್ಷೇತ್ರ 2: ಕಂಪ್ಲಿ ಕ್ಷೇತ್ರದಲ್ಲಿ 2 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದ್ದು, ಅಂತರ್‍ಜಿಲ್ಲೆ ಕೊಪ್ಪಳ ಗಡಿಭಾಗದಲ್ಲಿ ಕಂಪ್ಲಿ ಸೇತುವೆ ಬಳಿ ಮತ್ತು ವಿಜಯನಗರ ಜಿಲ್ಲೆ ಗಡಿಭಾಗದ ದೇವಲಾಪುರ – ಉಪ್ಪಾರಹಳ್ಳಿ ವೃತ್ತದಲ್ಲಿ ಸ್ಥಾಪನೆ ಮಾಡಲಾಗಿದೆ.
*ಸಿರುಗುಪ್ಪ ವಿಧಾನಸಭಾ ಕ್ಷೇತ್ರ 5: ಸಿರುಗುಪ್ಪ ಕ್ಷೇತ್ರದಲ್ಲಿ 5 ಚೆಕ್‍ಪೋಸ್ಟ್‍ಗಳನ್ನು ಆರಂಭಿಸಲಾಗಿದ್ದು, ಅಂತರ್‍ಜಿಲ್ಲೆ ರಾಯಚೂರು ಗಡಿಭಾಗದ ಇಬ್ರಾಹಿಂಪುರ-ಇಬ್ರಾಹಿಂಪುರ ಗ್ರಾಮ, ಅಂತರ್‍ರಾಜ್ಯ ಗಡಿಭಾಗದ ಇಟ್ಟಿಗೆಹಾಳ್, ವಟ್ಟುಮುರುವಾಣಿ, ಮಾಟಸೂಗೂರು ಹಾಗೂ ಕೆ.ಬೆಳಗಲ್ ಗ್ರಾಮಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿದೆ.
* ಬಳ್ಳಾರಿ ಗ್ರಾಮೀಣ ಕ್ಷೇತ್ರ 6: ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ಅಂತರ್‍ರಾಜ್ಯ ಆಂಧ್ರಪ್ರದೇಶ ಗಡಿಭಾಗದ ಹಲಕುಂದಿಕ್ರಾಸ್, ಎತ್ತಿನ ಬೂದಿಹಾಳ್ ಕ್ರಾಸ್, ರೂಪನಗುಡಿ ಕ್ರಾಸ್, ಜೋಳದರಾಶಿ ಗ್ರಾಮ, ಕಾರೇಕಲ್ಲು ಗ್ರಾಮ, ಸಿಂಧವಾಳ ಗ್ರಾಮ ಒಳಗೊಂಡಂತೆ 6 ಕಡೆ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ.
* ಬಳ್ಳಾರಿ ನಗರ ಕ್ಷೇತ್ರ 7 ಚೆಕ್‍ಪೋಸ್ಟ್: ನಗರದಲ್ಲಿ ಕೊಳಗಲ್ ರಸ್ತೆಯ ವಿಮಾನನಿಲ್ದಾಣ ವೃತ್ತ, ಕಾಣೆಕಲ್ ರಸ್ತೆಯ ಆಂಧ್ರಾಳ್ ಬೈಪಾಸ್ ಹತ್ತಿರ, ಮೋಕಾ ರಸ್ತೆಯ ಕೆಇಬಿ ವೃತ್ತ ಹತ್ತಿರ, ತಾಳೂರು ರಸ್ತೆಯ ಮಹಾನಂದಿ ಕೊಟ್ಟಂ ಹತ್ತಿರ, ರೂಪನಗುಡಿ ರಸ್ತೆಯ ದುರ್ಗ ವೃತ್ತದ ಹತ್ತಿರ, ಸಿರುಗುಪ್ಪ ರಸ್ತೆಯ ಕ್ಲಾಸಿಕ್ ಫಂಕ್ಷನ್ ಹಾಲ್ ಹತ್ತಿರ, ಅನಂತಪುರ ರಸ್ತೆಯ ಬೈಪಾಸ್ ವೃತ್ತದ ಹತ್ತಿರ ಸೇರಿ 7 ಸ್ಥಾಪಿಸಲಾಗಿದೆ.
* ಸಂಡೂರು ಕ್ಷೇತ್ರ 4 ಚೆಕ್‍ಪೋಸ್ಟ್: ಸಂಡೂರು ಕ್ಷೇತ್ರ ವ್ಯಾಪ್ತಿಯ್ಲಲಿ ಜಿಂದಾಲ್‍ನ ವಿದ್ಯಾನಗರ ವಿಮಾನ ನಿಲ್ದಾಣ ಹತ್ತಿರ, ಅಂತರ್‍ಜಿಲ್ಲೆಯಾದ ಚಿತ್ರದುರ್ಗ ಗಡಿಭಾಗದ ಮೊಟಲಕುಂಟ ಹತ್ತಿರ ಮತ್ತು ಅಂತರ್‍ರಾಜ್ಯ ಆಂಧ್ರಪ್ರದೇಶ ಗಡಿಭಾಗದ ದಿಕ್ಕಲದಿನ್ನಿ, ಜಿ.ಬಸಾಪುರ ಗ್ರಾಮಗಳಲ್ಲಿ 4 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ.