ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ರಾಗಾ ಭವಿಷ್ಯ

ವಾಷಿಂಗ್ಟನ್,ಜೂ.೨:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮಹಾಮೈತ್ರಿಯಿಂದ ಬಿಜೆಪಿಗೆ ಸೋಲುಂಟಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಭವಿಷ್ಯ ನುಡಿದಿದ್ದಾರೆ.ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಎಲ್ಲ ವಿರೋಧ ಪಕ್ಷಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಕೆಲವು ರಾಜ್ಯಗಳಲ್ಲಿ ಕೊಡು ಕೊಳ್ಳುವಿಕೆಯ ನಿಲುವನ್ನು ಕಾಂಗ್ರೆಸ್ ಹೊಂದಲಿದೆ. ಮಾತುಕತೆಗಳ ಮೂಲಕ ಮಹಾಮೈತ್ರಿ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್‌ಕ್ಲಬ್‌ನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು,ಕೇಂದ್ರ ಸರ್ಕಾರದ ವೈಫಲ್ಯಗಳನ್ನೇ ಮುಂದಿಟ್ಟುಕೊಂಡು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಸೋಲಿಸಲಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡುವ ನಂಬಿಕೆ ಇದ್ದು, ಆಶ್ಚರ್ಯಕರ ರೀತಿಯಲ್ಲಿ ಪಕ್ಷ ಪುಟಿದೇಳುವುದನ್ನು ನೋಡುತ್ತೀರಿ ಎಂದು ರಾಹುಲ್ ಹೇಳಿದರು.
ಪ್ರಧಾನಿ ನರೇಂದ್ರಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಅವರು ಭಾರತೀಯ ಸಮಾಜದ ಕತ್ತು ಹಿಸುಕುತ್ತಿದ್ದಾರೆ, ಭಾರತೀಯ ಸಮಾಜವನ್ನು ಧೃವೀಕರಿಸಿ ಮತ್ತು ಒಡೆಯುತ್ತಿದ್ದಾರೆ. ಮೋದಿ ಆಡಳಿತ ಸಾಂವಿಧಾನಿಕ ಸಂಸ್ಥೆಗಳನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ದೂರಿದರು.
೧೪೦ ಕೋಟಿ ಜನರಿರುವ ವಿವಿಧ ನಂಬಿಕೆಗಳ ಜಾತ್ಯಾತೀತ ಸಂವಿಧಾನದಲ್ಲಿರುವ ಭಾರತದಲ್ಲಿ ಬಿಜೆಪಿ ನರೇಂದ್ರಮೋದಿ ಮತ್ತು ಹಿಂದುತ್ವವನ್ನು ಪ್ರತಿಪಾದಿಸುತ್ತಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು.ಮತ್ತೊಂದೆಡೆ ಪ್ರಧಾನಿ ನರೇಂದ್ರಮೋದಿ ಅವರ ಬಹುನಿರೀಕ್ಷಿತ ಅಮೆರಿಕಕ್ಕೆ ಭೇಟಿನೀಡಲು ಸಜ್ಜಾಗಿದ್ದಾರೆ. ಜೂ. ೨೨ ರಂದು ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡುತ್ತಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳುನಡೆಯುತ್ತಿವೆ. ಇದರ ಬೆನ್ನಲ್ಲೆ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅಮೆರಿಕಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ನೇತೃತ್ವದ ಆಡಳಿತ ವೈಖರಿಯನ್ನು ಹಾಗೂ ಹಿಂದುತ್ವದ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದಾರೆ.