ಸಾರ್ವತ್ರಿಕ ಗಣೇಶ ನಿಮಜ್ಜನ : ೧೦೦ ಕ್ಕೂ ಅಧಿಕ ಗಣೇಶ ಮೂರ್ತಿಗಳ ಅಹೋರಾತ್ರಿ ಮೆರವಣಿಗೆ

ರಾಯಚೂರು.ಸೆ.೦೯- ನಗರದಲ್ಲಿ ಪ್ರಸಕ್ತ ವರ್ಷದ ಗಣೇಶೋತ್ಸವ ಅತ್ಯಂತ ವೈಭವದಿಂದ ತೆರೆಕಂಡು ನಿನ್ನೆ ೯ ನೇ ದಿನದ ಸಾಮೂಹಿಕ ಗಣೇಶ ಮೂರ್ತಿಗಳ ನಿಮಜ್ಜನ ಕಾರ್ಯಕ್ರಮ ರಾಯಚೂರು ಇತಿಹಾಸದಲ್ಲಿಯೆ ಹಿಂದೆಂದೂ ನಡೆಯದಂತಹ ಸುಧೀರ್ಘ ಮತ್ತು ಅತಿ ಹೆಚ್ಚಿನ ಗಣೇಶ ಮೂರ್ತಿಗಳು ನಿಮಜ್ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ನಿನ್ನೆ ರಾತ್ರಿ ೧೦ ಘಂಟೆಯಿಂದ ಆರಂಭಗೊಂಡ ಗಣೇಶ ಸಾಮೂಹಿಕ ನಿಮಜ್ಜನ ಮೆರವಣಿಗೆ ಇಂದು ಮಧ್ಯಾಹ್ನ ೨ ಘಂಟೆಯಾದರೂ, ಪೂರ್ಣಗೊಳ್ಳದಿರುವುದು ಗಣೇಶೋತ್ಸವದ ಅದ್ಧೂರಿ ಆಚರಣೆಗೆ ನಿದರ್ಶನವಾಗಿತ್ತು. ಸಾಮಾನ್ಯವಾಗಿ ಬೆರಳೆಣಿಕೆಯ ಗಣೇಶ ಮೂರ್ತಿಗಳು ಅತ್ಯಂತ ಭಾರೀ ಗಾತ್ರ ಹೊಂದಿರುತ್ತಿದ್ದವು. ಆದರೆ, ಈ ಸಲ ಶೇ.೮೦ ರಷ್ಟು ಗಣೇಶ ಮೂರ್ತಿಗಳು ಬೃಹತ್ ಗಾತ್ರ ಹೊಂದಿರುವುದು ವಿಶೇಷವಾಗಿತ್ತು. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಸಂಖ್ಯೆಯಲ್ಲೂ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರಿಂದ ೯ ನೇ ದಿನ ಇಲ್ಲಿವರೆಗೂ ಶೇ.೮೦ ರಿಂದ ೯೦ ಗಣೇಶ ಮೂರ್ತಿಗಳು ವಿಸರ್ಜನೆ ಮಾಡಲಾಗುತ್ತಿತ್ತು.
ಆದರೆ, ಈ ಸಲ ೧೦೦ ಕ್ಕೂ ಅಧಿಕ ಮೂರ್ತಿಗಳು ನಿಮಜ್ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ಹಬ್ಬದ ವೈಭವಕ್ಕೆ ಮೆರಗು ನೀಡಿದಂತಿತ್ತು. ಅಹೋರಾತ್ರಿ ಮೆರವಣಿಗೆ ನಿರ್ವಹಿಸಿದ ಗಣೇಶೋತ್ಸವ ವಿವಿಧ ಸಮಿತಿಗಳು ದಣಿವಿಲ್ಲದೆ, ಮಧ್ಯಾಹ್ನ ೩, ೪ ಘಂಟೆವರೆಗೂ ವಿಸರ್ಜನಾ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.
ಮುಂಜಾನೆ ೧೧ ಘಂಟೆ ಸುಮಾರಿಗೆ ಬಹುತೇಕ ಗಣೇಶ ಮೂರ್ತಿಗಳು ತೀನ್ ಖಂದೀಲ್‌ನಿಂದ ಪಟೇಲ್ ರಸ್ತೆವರೆಗೂ ಮೆರವಣಿಗೆಯಲ್ಲಿ ಸಾಗಿದ್ದವು.
ಬೆಳಗಿನಜಾವದೊಳಗೆ ಗಣೇಶ ಮೆರವಣಿಗೆ ಖಾಸಾಬಾವಿಯಲ್ಲಿ ಸೇರಿರುತ್ತಿತ್ತು. ಆದರೆ,ಈ ಸಲ ೧೧, ೧೨ ಘಂಟೆಯಾದರೂ, ಇನ್ನೂ ನೇತಾಜಿ ವೃತ್ತ, ತೀನ್ ಖಂದೀಲಲ್ಲೇ ಮೆರವಣಿಗೆ ಸಾಲುಗಟ್ಟಿತ್ತು. ಡಿಜೆಗಳ ಬಳಕೆ ನಿರ್ಬಂಧವಿದ್ದರೂ, ಗಣೇಶೋತ್ಸವ ಸಮಿತಿಗಳಂತೂ ಬೃಹತ್ ಗಾತ್ರದ ಡಿಜೆಗಳ ಭಾರೀ ಸದ್ದಿಗೆ ಯುವಕರು ನೃತ್ಯ ಮಾಡುತ್ತಿದ್ದರು. ಪೊಲೀಸರಿಗಂತೂ ಈ ಮೆರವಣಿಗೆ ಸಾಕಪ್ಪ ಎನ್ನುವ ಮಟ್ಟಕ್ಕೆ ತಾಳ್ಮೆಗೆಡಿಸಿತ್ತು. ಆದರೂ, ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರೂ, ಯಾವುದೇ ಅಹಿತಕರ ಘಟನೆ ನಡೆಯದಂತೆ ಅತ್ಯಂತ ಶಾಂತಿ, ಸುವ್ಯವಸ್ಥೆಯೊಂದಿಗೆ ಮೆರವಣಿಗೆ ನಡೆಸಲಾಯಿತು.
ಸರಿಸುಮಾರು ೧೦೦ ಕ್ಕೂ ಅಧಿಕ ಗಣೇಶ ವಿಸರ್ಜನೆ ಅತ್ಯಂತ ಕ್ರಮ ಬದ್ಧವಾಗಿ ನಡೆಸಲಾಯಿತು. ವಿಸರ್ಜನಾ ಸಂದರ್ಭದಲ್ಲೂ ಯಾವುದೇ ಅವಘಡ ಸಂಭವಿಸದಂತೆ ಭಾರೀ ಎಚ್ಚರಿಕೆಯಿಂದ ಖಾಸಬಾವಿ ಹತ್ತಿರ ಜನರನ್ನು ಬಿಡದೆ, ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಚಂದ್ರಮೌಳೇಶ್ವರ ವೃತ್ತದಲ್ಲಿ ಗಜಾನನ ಸಮಿತಿ ವತಿಯಿಂದ ಗಣೇಶ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಗೌರವಿಸಿ, ಬೆಳ್ಳಿಯ ಪದಕ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಗಜಾನನ ಸಮಿತಿಯ ಮುಖಂಡರು ಆಗಮಿಸಿದ್ದರು.
ಶಾಸಕ ಡಾ.ಶಿವರಾಜ ಪಾಟೀಲ್, ಹಾಲಿ ಶಾಸಕ ಸೈಯದ್ ಯಾಸೀನ್, ಕಾಂಗ್ರೆಸ್ ಯುವಕ ಮುಖಂಡ ರವಿ ಬೋಸರಾಜು, ಜಾದಳ ಮುಖಂಡರಾದ ರಾಮನಗೌಡ ಏಗನೂರು, ಭಾನುರಾಜ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.