ಸಾರ್ವತ್ರಿಕ ಆರೋಗ್ಯ ಯೋಜನೆ ರೂಪಿಸಿ

ದೇವದುರ್ಗ.ಜ.೯- ಸಾರ್ವತ್ರಿಕ ರಕ್ಷಣೆಗೆ ಯೋಜನೆ ರೂಪಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಮಿನಿವಿಧಾನಸೌಧದ ಮುಂದೆ ಸಿಐಟಿಯು ತಾಲೂಕು ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ ವಿರೋಧಿನೀತಿ ಅನುಸರಿಸುತ್ತಿವೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ನಿರಂಕುಶ ಆಡಳಿತ ನೀಡುತ್ತಿದೆ. ಸರ್ಕಾರದ ನಿರ್ಧಾರದಿಂದ ಆರ್ಥಿಕತೆ ದಿವಾಳಿಯಾಗಿದ್ದು, ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ರೈತ, ಕಾರ್ಮಿಕ ವಿರೋಧಿ ಕೃಷಿ ಕಾಯ್ದೆ, ಕಾರ್ಮಿಕ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ವಾಪಸ್ ಪಡೆಯಬೇಕು. ಎಲ್ಲ ಬಡ ಕುಟುಂಬಗಳಿಗೆ ಮಾಸಿಕ ೭೫೦೦ರೂ. ಹಾಗೂ ೧೦ಕೆಜಿ ಅಕ್ಕಿ ಉಚಿತವಾಗಿ ನೀಡಬೇಕು. ನರೇಗಾ ಯೋಜನೆಯಡಿ ಉದ್ಯೋಗ ಸಂಖ್ಯೆ ೨೦೦ಕ್ಕೆ ಹೆಚ್ಚಿಸಿ ನಿತ್ಯ ೭೦೦ ರೂ. ಕೂಲಿ ನೀಡಿ, ಯೋಜನೆ ನಗರಕ್ಕೂ ವಿಸ್ತರಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಯೋಜನೆ ರೂಪಿಸಬೇಕು. ನೂತನ ಶಿಕ್ಷಣ ನೀತಿ, ಎನ್‌ಪಿಎಸ್ ರದ್ದು ಮಾಡಬೇಕು. ಕಾರ್ಮಿಕ ವಿರೋಧಿ ಖಾಸಗೀಕರಣ ಕೈಬಿಡಬೇಕು ಎಂದು ಒತ್ತಾಯಿಸಿ ಗ್ರೇಡ್-೨ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಂಗಮ್ಮ ಅನ್ವರ್, ಶಕುಂತಲಾ ದೇಸಾಯಿ, ಗಿರಿಯಪ್ಪ ಪೂಜಾರಿ, ಮರಿಯಮ್ಮ, ರಮಾದೇವಿ, ಶೋಭಾ, ಶಶಿಕಲಾ, ಶಂಕರ, ಶ್ರೀಲೇಖಾ ಇತರರಿದ್ದರು.