ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಲು ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೧೩: ಚಿತ್ರಕಲೆಯಲ್ಲಿ ಆಸಕ್ತಿ ಇರುವ  ವಿದ್ಯಾರ್ಥಿಗಳಿಗೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಪ್ರದರ್ಶನಗಳನ್ನು ಏರ್ಪಡಿಸದೆ ಸಾರ್ವಜನಿಕ ಸ್ಥಳಗಳಲ್ಲಿ  ಪ್ರದರ್ಶನಗಳು ಏರ್ಪಡಿಸಿದರೆ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಎಸ್ ಎಸ್ ಕೇರ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.ನಗರದ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕಲಾ ಪ್ರದರ್ಶನಗಳನ್ನು ನಗರದ ಗಾಜಿನ ಮನೆ ಇಲ್ಲವೇ ನಗರದ ಮುಖ್ಯ ರಸ್ತೆಗಳಲ್ಲಿ ಅದರಲ್ಲೂ ಬೇಸಿಗೆ ಶಿಬಿರಗಳಲ್ಲಿ ಇಂತಹ ಪ್ರದರ್ಶನಗಳನ್ನು ಏರ್ಪಡಿಸಿದರೆ ಕಲೆಗಳಿಗೂ ಒಂದು ಪ್ರಾಶಸ್ತ್ರ ಸಿಗುತ್ತದೆ ಅಲ್ಲದೆ ಪ್ರತಿಭೆಗಳು ಸಹ ಒಂದು ವೇದಿಕೆ ದೊರಕಿದಂತಾಗುತ್ತದೆ ಎಂದು ಹೇಳಿದರು.ಪೋಷಕರು ಕೂಡ ತಮ್ಮ ಮಕ್ಕಳ ಆಸಕ್ತಿಗೆ ಅನುಗುಣವಾಗಿ ವಿದ್ಯಾಭ್ಯಾಸ ಕೊಡಿಸಿದರೆ ಅವರು ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಅದರಲ್ಲೂ ವಿಶೇಷವಾಗಿ ಕಲೆಯಂತಹ ಕೋರ್ಸುಗಳನ್ನು ಹೆಚ್ಚುಹೆಚ್ಚಾಗಿ ವಿಶ್ವವಿದ್ಯಾಲಯಗಳು ಹೊರ ತಂದರೆ ಕಲೆಯನ್ನು ಪ್ರೋತ್ಸಾಹಿಸುವ ಜತೆಗೆ ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರ ತರಲು ಸಾಧ್ಯ ಎಂದು ಹೇಳಿದರು.ದಾವಣಗೆರೆ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಬಿ.ಡಿ.ಕುಂಬಾರ್ ಮಾತನಾಡಿ, ಇಂತಹ ಕಲಾ ಪ್ರದರ್ಶನಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಏರ್ಪಡಿಸಿದರೆ ದಾವಣಗೆರೆ ಜನತೆಗೆ ಕಲೆಯ ಬಗ್ಗೆ ತಿಳಿಸಿಕೊಟ್ಟಂತೆ ಆಗುತ್ತದೆ. ಅಲ್ಲದೇ ಮುಂದಿನ ವರ್ಷಕ್ಕೆ ದೃಶ್ಯ ಕಲಾ ಮಹಾ ವಿದ್ಯಾಲಯಕ್ಕೆ 60 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.ಈ ವೇಳೆ ಕಾಲೇಜಿನ ಪ್ರಚಾರ್ಯ ಜಯರಾಜ್ ಪಾಟೀಲ್, ಸತೀಶ್ ವಲ್ಲೇಪುರ, ನಂದ ಕುಮಾರ್, ಸುರೇಶ್ ಹರಿವಾಣ, ಶಿವಶಂಕರ್ ಸುತಾರ್ ಇತರರು ಇದ್ದರು.