ಸಾರ್ವಜನಿಕ ಸಮಾರಂಭಗಳಿಗೆ ಜನ ಸೇರುವಿಕೆಗೆ ಪ್ರಮಾಣ ನಿಗದಿ : ಡಿಸಿ

ದಾವಣಗೆರೆ,ಏ.18; ಕೋವಿಡ್-19 ಸೋಂಕು ಹರಡುವಿಕೆ ಉಲ್ಭಣಗೊಂಡಿರುವ ಹಿನ್ನೆಲೆ ನಿಯಂತ್ರಣ ಕಾರ್ಯ ಅತ್ಯವಶ್ಯಕವಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಏ.16 ರಂದು ಹೊರಡಿಸಿದ ಆದೇಶದಂತೆ ಸಾರ್ವಜನಿಕ ಸಮಾರಂಭ, ಆಚರಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ಜನರ ಒಗ್ಗೂಡುವಿಕೆಗೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ.  ಕೊರೊನ ವೈರಾಣು ಸೋಂಕು ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆ ಹಾಗೂ ನಿರ್ವಹಣೆ ಕ್ರಮಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಈಗಾಗಲೇ ಹೊರಡಿಸಿದ್ದು ಏ.30 ರವರೆಗೆ ಜಾರಿಯಲ್ಲಿರುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರತ್ಯೇಕವಾಗಿ ತಿದ್ದುಪಡಿ ಆದೇಶದಲ್ಲಿ ಪ್ರಮಾಣಿತ ಕಾರ್ಯವಿಧಾನಗಳನ್ನು ಹೊರಡಿಸಿದೆ.  ಭಾರತ ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಆಚರಣೆಗಳು, ಸಮಾರಂಭಗಳಲ್ಲಿ ಪ್ರತಿಯೊಬ್ಬರು 3.25 ಚದರ ಮೀ ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಮದುವೆ ಸಮಾರಂಭಕ್ಕೆ ತೆರೆದ ಪ್ರದೇಶದಲ್ಲಿ 200 ಜನ, ಕಲ್ಯಾಣ ಮಂಟಪ, ಸಭಾಂಗಣ, ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 100 ಜನಕ್ಕಿಂತ ಹೆಚ್ಚು ಮಂದಿ ಸೇರಬಾರದು. ಹುಟ್ಟಿದ ಹಬ್ಬದ ಆಚರಣೆಗೆ ತೆರೆದ ಸ್ಥಳದಲ್ಲಿ 50 ಜನ, ಒಳಾಂಗಣದಲ್ಲಿ 25 ಜನ, ನಿಧನ ಅಥವಾ ಶವಸಂಸ್ಕಾರಕ್ಕೆ ತೆರದ ಸ್ಥಳದಲ್ಲಿ 50 ಜನ, ಒಳಾಂಗಣದಲ್ಲಿ 25 ಜನ, ಅಂತ್ಯಕ್ರಿಯೆಗೆ 25, ಇತರೆ ಸಮಾರಂಭಗಳಲ್ಲಿ ಹಾಲ್‌ನ ವಿಸ್ತೀರ್ಣಕ್ಕೆ ಅನುಗುಣವಾಗಿ 50 ಜನ, ರಾಜಕೀಯ ಆಚರಣೆಗಳು ಹಾಗೂ ಸಮಾರಂಭಗಳಿಗೆ ತೆರೆದ ಸ್ಥಳದಲ್ಲಿ 200 ಜನಕ್ಕಿಂತ ಹೆಚ್ಚು ಮಂದಿ ಸೇರಬಾರದು. ಧಾರ್ಮಿಕ ಆಚರಣೆ ಅಥವಾ ಸಮಾರಂಭಗಳನ್ನು ನಿಷೇಧಿಸಲಾಗಿದೆ.  ಈ ನಿಯಮ ಉಲ್ಲಂಘಿಸಿದರೆ ಹಾಗೂ ತಮ್ಮ ಆವರಣದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದನ್ನು ಆಯಾ ಮಾಲೀಕರನ್ನು ಹೊಣೆಯಾಗಿಸಿ ದುಬಾರಿ ದಂಡ ವಿಧಿಸಲಾಗುವುದು. ಸಾರ್ವಜನಿಕರು ಆದೇಶ ಪಾಲನೆಯಲ್ಲಿ ಲೋಪವೆಸಗಿದರೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.