ಅಥಣಿ :ಜೂ.15: ತಾಲೂಕಾ ಮಟ್ಟದ ಅಧಿಕಾರಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕು. ಕಾನೂನು ಚೌಕಟ್ಟಿನಲ್ಲಿಯೆ ಕಾರ್ಯನಿರ್ವಹಿಸಬೇಕು. ಸರ್ಕಾರಿ ನಿಯಮ ಬಿಟ್ಟು ಕೆಲಸ ಮಾಡಿದರೆ ಅಧಿಕಾರಿಗಳು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಬೆಳಗಾವಿ ಲೋಕಾಯುಕ್ತ ಡಿವೈಎ???ಪಿ ಬಿ. ಎಸ್ ಪಾಟೀಲ ಹೇಳಿದರು.
ಅವರು ಬುಧವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಸಿದ್ದ ಕರ್ನಾಟಕ ಲೋಕಾಯುಕ್ತ ಕಾನೂನು ಅರಿವು ಮತ್ತು ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಜನರು ತಮ್ಮ ಕುಂದುಕೊರತೆ ಹಾಗೂ ದೂರುಗಳನ್ನು ಜಿಲ್ಲಾ ಕೇಂದ್ರದಲ್ಲಿರುವ ಲೋಕಾಯುಕ್ತ ಕಚೇರಿಗೆ ಆಗಮಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರತಿ ತಿಂಗಳಿಗೊಮ್ಮೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಎಲ್ಲಾ ಅಧಿಕಾರಿಗಳನ್ನು ಕರೆಸಿ ಸಾರ್ವಜನಿಕರ ಸಣ್ಣಪುಟ್ಟ ದೂರುಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಾಗುವುದು. ಸಾರ್ವಜನಿಕರು ಲಿಖಿತವಾಗಿ ದೂರು ನೀಡಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲು ಅನುಕೂಲವಾಗುತ್ತದೆ. ಇನ್ನು ಕೆಲವು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಸಭೆಯಲ್ಲಿ ನೀರಾವರಿ ನಿಗಮದಿಂದ ಕಾಲುವೆ ನಿರ್ಮಾಣಕ್ಕಾಗಿ 39 ಗುಂಟೆ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಭೂಮಿ ತಂತ್ರಾಂಶದಲ್ಲಿ ದೋಷವಾಗಿ 2 ಎಕರೆ 39 ಗುಂಟೆ ಎಂದು ನಮ್ಮದಾಗಿದೆ ಎಂದು ರೈತರೊಬ್ಬರು ದೂರು ನೀಡಿದಾಗ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ತಹಸೀಲ್ದಾರ್ ಅವರ ಮಧ್ಯಸ್ಥಿಕೆಯಲ್ಲಿ ಸಮಸ್ಯೆಗೆ ಪರಿಹಾರ ರೂಪಿಸಲಾಯಿತು. ಇದೇ ರೀತಿ ಸಾರ್ವಜನಿಕರು ಮಾಹಿತಿ ಹಕ್ಕು ನೀಡಲು ಸತಾಯಿಸುತ್ತಿರುವ ಅಧಿಕಾರಿಗಳ ಬಗ್ಗೆ, ಇ-ಸ್ವತ್ತು ನೀಡದಿರುವುದು, ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಪುರಸಭೆಗಳಲ್ಲಿ ಆಶ್ರಯ ಮನೆಗಳ ಬಿಲ್ ವಿಳಂಬವಾಗುತ್ತಿರುವುದು, ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಶಿಥಿಲಾವಸ್ಥೆಯಲ್ಲಿ ಇರುವ ಟ್ರಾನ್ಸ್ಫಾರ್ಮರ್ ಕಂಬ ಮತ್ತು ತಂತಿಗಳನ್ನು ಬದಲಿಸಿದೆ ಸತಾಯಿಸುತ್ತಿರುವುದು, ನರೇಗಾ ಯೋಜನೆಯಲ್ಲಿ ಮಾಡಿರುವ ಕಾಮಗಾರಿಗಳಿಗೆ ಬಿಲ್ ನೀಡದೇ ಇರುವದು ಸೇರಿದಂತೆ ವಿವಿಧ ವಿಷಯದ ಬಗ್ಗೆ ದೂರು ನೀಡಿದರು.
ಸಭೆಯಲ್ಲಿ ಲೋಕಾಯುಕ್ತ ಡಿಎಸ್ಪಿ ಭರತ್ ರೆಡ್ಡಿ, ಅಥಣಿ ತಹಸೀಲ್ದಾರ್ ಬಿ ಎಸ್ ಕಡಕಬಾವಿ, ಲೋಕಾಯುಕ್ತ ಸಿ ಪಿ ಐ ಉಸ್ಮಾನ್ ಅವಟಿ ರವಿಕುಮಾರ ಧರ್ಮಟ್ಟಿ, ಉಪ ತಹಶೀಲ್ದಾರ ಮಹಾದೇವ ಬಿರಾದಾರ, ತಾಲೂಕ ಪಂಚಾಯತ ವ್ಯವಸ್ಥಾಪಕ ಉದಯಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.