ಸಾರ್ವಜನಿಕ ಶಿಕ್ಷಣ ಉಳಿಸಲು
ಪ್ರತಿಭಟನಾ ಮೆರವಣಿಗೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.29: ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಈಶ್ವರಚಂದ್ರ ವಿದ್ಯಾಸಾಗರ್ ಅವರ ಸ್ಮರಣ ದಿನ ಅಂಗವಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ದಿನವನ್ನು ನಗರದ ಗಾಂಧಿಭವನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿ ಈಡಿಗಾ ಕಾಂಪ್ಲೇಕ್ಸ್ ದಿಂದ  ಜಿಲ್ಲಾಧಿಕಾರಿಗಳ ಕಛೇರಿ ತಲುಪಿ ಮಾನ್ಯ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಎಐಡಿಎಸ್‌ಓ ಅಧ್ಯಕ್ಷ ರವಿಕಿರಣ್. ಜೆ.ಪಿ ಅವರು ಮಾತನಾಡುತ್ತಾ. ನವೋದಯ ಚಳುವಳಿಯ ಮಹಾನ್ ಧರ್ಮನಿರಪೇಕ್ಷ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್, ಸಾವಿತ್ರಿ ಬಾಯಿ ಫುಲೆ, ಜ್ಯೋತಿಬಾ ಫುಲೆ, ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ, ನಮ್ಮ ರಾಜ್ಯದಲ್ಲಿ ಕುದ್ಮಲ್ ರಂಗರಾಯರು, ಪಂಡಿತ್ ತಾರಾನಾಥ್ ಮುಂತಾದವರು ಸಾರ್ವಜನಿಕ ಶಿಕ್ಷಣಕ್ಕಾಗಿ ಹೋರಾಡಿದರು. ಸರ್ಕಾರದ ನೀತಿಗಳು ಶಿಕ್ಷಣವನ್ನು ಮತ್ತಷ್ಟು ದುಬಾರಿಗೊಳಿಸುವತ್ತ, ಖಾಸಗೀಕರಣಗೊಳಿಸುವತ್ತ ರೂಪುಗೊಳ್ಳುತ್ತಿವೆ. ಅಂತಹ ಒಂದು ನೀತಿ ಈಗ ಅತ್ಯಂತ ಚರ್ಚೆಗೆ ಹಾಗೂ ವಿವಾದಕ್ಕೆ ತುತ್ತಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ, ಹಲವು ಶಿಕ್ಷಣ ವಿರೋಧಿ, ಬಡ ಜನ ವಿರೋಧಿ ಪ್ರತಿಪಾದನೆಗಳು ಇವೆ. ಅವುಗಳಲ್ಲಿ ‘ ಶಾಲಾ ಸಂಕೀರ್ಣ ‘ ಅಥವಾ ಬೇರೆ ಪದಗಳಲ್ಲಿ ಹೇಳುವುದಾದರೆ, ಕಡಿಮೆ ದಾಖಲಾತಿ ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕು ಎನ್ನುವುದು ಇದೆ. ಕರ್ನಾಟಕದಲ್ಲಿ ಅಂತಹ 13,800 ಸರ್ಕಾರಿ ಶಾಲೆಗಳ ಮುಚ್ಚುವಿಕೆಯು ಎನ್.ಇ.ಪಿ-2020 ಅಡಿಯಲ್ಲಿ ನಡೆಯುತ್ತಿದೆ ಎಂಬ ವಿಷಯವನ್ನು ನಾವು ಈ ತಕ್ಷಣ ಗ್ರಹಿಸಬೇಕು ಎಂದು ಹೇಳಿದರು.
 ಎಐಡಿಎಸ್‌ಓ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ. ಸರ್ಕಾರದ ಕೆಲಸ ಶಿಕ್ಷಣಕ್ಕೆ ಧನಸಹಾಯ ಮಾಡುವುದು ಹೊರತು ಬೇರೇನೂ ಅಲ್ಲ. ಶೈಕ್ಷಣಿಕ ನೀತಿಗಳನ್ನು ರೂಪಿಸುವುದು, ಪಠ್ಯಪುಸ್ತಕ ರಚನೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಶೈಸ್ಖನಿಕ ನಿರ್ವಹಣೆ ಎಲ್ಲವನ್ನೂ ಶಿಕ್ಷಣ ತಜ್ಞರು, ಉಪನ್ಯಾಸಕರು, ಪೋಷಕರು, ವಿದ್ಯಾರ್ಥಿಗಳು ಇವರಿಗೆ ಮಾತ್ರ ಬಿಡಬೇಕು. ಈ ಯಾವ ವಿಷಯದಲ್ಲೂ ಸರ್ಕಾರವು ಹಸ್ತಕ್ಷೇಪ ಮಾಡಬಾರದು.
ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಉಪಾಧ್ಯರಾದ ಜೆ.ಸೌಮ್ಯ, ಕೆ.ಈರಣ್ಣ, ಸೆಕ್ರಟರಿಯೇಟ್ ಸದಸ್ಯರಾದ ಎಮ್.ಶಾಂತಿ, ನಿಂಗರಾಜ, ಅನುಪಮಾ, ಸಿದ್ದು, ನಿಹಾರಿಕ ಮತ್ತು ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.