ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರಿಂದ ಶಿಲಾಶಿಲ್ಪ ಶಿಬಿರಕ್ಕೆ ಚಾಲನೆ

ಕಲಬುರಗಿ,ಫೆ.20:ಕಲ್ಯಾಣ ಕರ್ನಾಟಕ ಉತ್ಸವ-2023 ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ ಭವನದ ಆವರಣದಲ್ಲಿ ಇದೇ ಫೆಬ್ರವರಿ 20 ರಿಂದ 26 ರವರೆಗೆ ಹಮ್ಮಿಕೊಳ್ಳಲಾಗಿರುವ ಶಿಲಾಶಿಲ್ಪ ಶಿಬಿರಕ್ಕೆ ಸೋಮವಾರ ಕಲ್ಯಾಣ ಕರ್ನಾಟಕ ಉತ್ಸವದ ಚಿತ್ರಕಲೆ, ನೃತ್ಯ, ಪ್ರಬಂಧ, ಶಿಬಿರ/ ಪ್ರದರ್ಶನ ಸಮಿತಿಯ ಅಧ್ಯಕ್ಷರಾಗಿರುವ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಗರಿಮಾ ಪನ್ವಾರ್ ಅವರು ಅವರು ಸೋಮವಾರ ಚಾಲನೆ ನೀಡಿದರು.

ಈ ಶಿಲಾಶಿಲ್ಪ ಶಿಬಿರದಲ್ಲಿ ಕಲ್ಯಾಣ ಕರ್ನಾಟಕದ ತಲಾ 15 ಜನ ಪ್ರಧಾನ ಶಿಲ್ಪಿಗಳು ಹಾಗೂ ಸಹಾಯಕ ಶಿಲ್ಪಿಗಳು ಭಾಗವಹಿಸಿದ್ದಾರೆ. ಸಂಪ್ರದಾಯಿಕÀ ಶಿಲ್ಪಕ್ಕೆ ಮೈಸೂರಿನಿಂದ ಹಾಗೂ ಸಮಕಾಲೀನ ಶಿಲ್ಪಕ್ಕೆ ಬಾಗಲಕೋಟೆಯಿಂದ ಶಿಲೆಗಳನ್ನು ತರಿಸಲಾಗಿದೆ.

ಕಲಬುರಗಿ ಕಾನೂನು ಮತ್ತು ಸುವ್ಯವಸ್ಥೆ ಡಿ.ಸಿ.ಪಿ. ಯವರಾದ ಅಡ್ಡೂರ ಶ್ರೀನಿವಾಸಲು, ಕಲಬುರಗಿ ಕ್ರೈಂ ಮತ್ತು ಟ್ರಾಫಿಕ್ ಡಿ.ಸಿ.ಪಿ. ಚಂದ್ರಪ್ಪ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಶರಣಪ್ಪ ಸತ್ಯಂಪೇಟೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಚಿತ್ರಕಲೆ, ಶಿಲ್ಪಕಲೆ, ನೃತ್ಯ, ಪ್ರಬಂಧ ಶಿಬಿರ/ಪ್ರದರ್ಶನದ ಸದಸ್ಯ ಕಾರ್ಯದರ್ಶಿಗಳಾದ ಸಕ್ರೆಪ್ಪಗೌಡ ಜಿ. ಬಿರಾದಾರ್, ಹಿರಿಯ ಶಿಲ್ಪಕಲಾವಿದ ಚಂದ್ರಶೇಖರ ವಾಯ್. ಶಿಲ್ಪಿ, ಶಿಬಿರದ ಸಂಚಾಲಕ ನಿಂಗಪ್ಪ ಡಿ.ಕೇರಿ, ಸಹ ಸಂಚಾಲಕ ಮಹೇಶ ಡಿ.ತಳವಾರ, ಖ್ಯಾತ ಚಿತ್ರಕಲಾವಿದ ದೌಲತರಾಯ ದೇಸಾಯಿ, ಸಿದ್ದು ಮರಗೋಳ, ರಾಜೇಶ ನೀಲಹಳ್ಳಿ, ನಗರದ ಖ್ಯಾತನಾಮ ಕಲಾವಿದರು ಹಾಗೂ ಸಾರ್ವಾಜನಿಕರು ಉಪಸ್ಥಿತರಿದ್ದರು.

ಇಂದಿನಿಂದ ಆರಂಭಗೊಂಡ ಶಿಲಾ ಶಿಲ್ಪ ಶಿಬಿರವು ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ ಭವನದ ಆವರಣದಲ್ಲಿ ಫೆಬ್ರವರಿ 26 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಶಿಬಿರವನ್ನು ವೀಕ್ಷಿಸಬಹುದಾಗಿದೆ.