ಸಾರ್ವಜನಿಕ ವಲಯಗಳ ಮಾರಟಕ್ಕೆ ಖಂಡನೆ

ಹರಪನಹಳ್ಳಿ, ಜ.07: ದೇಶದಲ್ಲಿ ರೈಲು, ಏರ್‍ಪೋರ್ಟ್, ಆಯಿಲ್ ಸೇರಿದಂತೆ ಪ್ರತಿಯೊಂದು ವಲಯವನ್ನು ಮಾರಾಟ ಮಾಡಲಾಗುತ್ತಿದೆ. ಕಾಂಗ್ರೆಸ್‍ನವರು ಏನೂ ಮಾಡಿಲ್ಲವೆಂದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿಯವರು ಕಾಂಗ್ರೆಸ್ ಮಾಡದಿದದ್ರೆ ನೀವು ಏನು ಮಾರಾಟ ಮಾಡುತ್ತಿದ್ದೀರಿ ಎಂದು ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರಶ್ನಿಸಿದರು.
ಪಟ್ಟಣದ ತೆಗ್ಗಿನಮಠ ಆವರಣದ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆವತಿಯಿಂದ ಹಮ್ಮಿಕೊಂಡಿದ್ದ ಕೃಷಿ ಬಿಕ್ಕಟ್ಟು ಮತ್ತು ಸವಾಲುಗಳು ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಕಾರ್ಪೊರೇಟ್ ಪರವಾದ ಸರ್ಕಾರವಾಗಿದೆ. ದೇಶದಲ್ಲಿ ಸ್ವಾತಂತ್ರ್ಯ ಚಳುವಳಿಯ ನಂತರ ರೈತರ ದೊಡ್ಡಮಟ್ಟದ ಚಳುವಳಿ ನಡೆಯುತ್ತಿದೆ. ಹೋರಾಟದಲ್ಲಿ ಸಾವನ್ನಪ್ಪಿದ ರೈತರಿಗೆ ಒಂದು ಅನುಕಂಪದ ಮಾತು ಕೂಡ ಪ್ರಧಾನಮಂತ್ರಿಗಳು ಹೇಳದಿರುವುದು ದೊಡ್ಡ ದುರಂತ ಸಂಗತಿ ಎಂದರು.
ಎಪಿಎಂಸಿ, ಕೃಷಿ ಕಾಯೆಗಳಿಂದ ತಕ್ಷಣವೇ ಏನೂ ತೊಂದರೆ ಇಲ್ಲ, ಆದರೆ ಒಂದು ದಶಕಗಳ ನಂತರ ಪರಿಣಾಮ ಗೊತ್ತಾಲಿದೆ. ಬಣ್ಣದ ಮಾತುಗಳಿಂದ ಜನರನ್ನು ಮರುಳು ಮಾಡಿದಂತೆ ಈಗಲೂ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಈ ಕಾಯ್ದೆಗಳ ಕುರಿತು ಜಿಲ್ಲಾ, ಕಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಶಿಬಿರಗಳನ್ನು ನಡೆಸಿ ರೈತರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ತಿಳಿಸಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಮಿತಿಯ ಎನ್.ಅನಂತನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿದರು. ಮಹೇಶ್ವರಸ್ವಾಮಿ, ಗುಡಿಹಳ್ಳಿ ಹಾಲೇಶ್, ಷಣ್ಮುಖಪ್ಪ, ತಿಮ್ಮಪ್ಪ, ಅಲಗಿಲವಾಡ ವಿಶ್ವನಾಥ, ಹೆಚ್.ಎಂ.ಸತೋಷ್, ಕಲ್ಲಹಳ್ಳಿ ಗೋಣ್ಯೆಪ್ಪ, ರಮೇಶನಾಯ್ಕ ಚರ್ಚೆಯಲ್ಲಿ ಭಾಗವಹಿಸಿದ್ದರು. ಹೆಚ್.ಕೆ.ಹಾಲೇಶ್, ಎಂ.ಟಿ.ಸುಭಾಷಚಂದ್ರ, ಇರ್ಫಾನ್ ಮುದಗಲ್, ಹೆಚ್.ಬಿ.ಪರುಶುರಾಮಪ್ಪ, ರಾಜಶೇಖರ ಸವಣೂರು, ತೆಲಿಗಿ ಮಂಜುನಾಥ ಇತರರು ಉಪಸ್ಥಿತರಿದ್ದರು.