ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗೆ ಆಗ್ರಹ

ರಾಯಚೂರು,ಜ.೧೧- ರಾಯಚೂರು ನಗರದಲ್ಲಿರುವ ಸಾರ್ವಜನಿಕರ ಉದ್ಯಾನವನವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಅಭಿವೃದ್ಧಿಗೊಳಿಸಬೇಕೆಂದು ಆಗ್ರಹಿಸಿ ಲೋಕ ಜನಶಕ್ತಿ ಪಾರ್ಟಿ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗೆಂದು ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಆದರೆ ಇದುವರೆಗೂ ಉದ್ಯಾನವನ ನಿರ್ಮಾಣವಾಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಬೇಸಿಗೆಕಾಲ ಆರಂಭವಾಗಲಿದ್ದು, ಸದರಿ ಸಾರ್ವಜನಿಕ ಉದ್ಯಾನವನದಲ್ಲಿ ಕಿಡಿಗೇಡಿಗಳು ಮಧ್ಯಪಾನ ಮಾಡಿ ಖಾಲಿ ಬಾಟಲಿಗಳನ್ನು ವಾಟರ್ ಪ್ಯಾಕೆಟ್ ಗಳನ್ನು ಹಾಗೂ ಗುಟ್ಕಾ ಸಿಗರೇಟ್ ಇತರ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದ ಉದ್ಯಾನವನವು ಅನೈತಿಕ ಚಟುವಟಿಕೆಗಳಿಗೆ ತಾಣವಾಗಿ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಉದ್ಯಾನವನದಲ್ಲಿ ಸಿಬ್ಬಂದಿಗಳ ಕೊರತೆ ಇರುವ ಕಾರಣ ಈ ಎಲ್ಲ ಚಟುವಟಿಕೆಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ. ಇಲ್ಲಿನ ಸಾರ್ವಜನಿಕ ಮೂತ್ರಾಲಯ ಸಂಪೂರ್ಣ ಹಾಳಾಗಿದೆ ಮೂತ್ರಾಲಯದ ಪಕ್ಕದ ಗೋಡೆಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ದುರ್ವಾಸನೆ ಬೀರುತ್ತಿದೆ. ಉದ್ಯಾನವನದ ಸುತ್ತಲಿರುವ ಕಾಂಪೌಂಡ್ ಕೂಡ ಬೀಳುವ ಸ್ಥಿತಿಗೆ ಬಂದಿದೆ ಎಂದು ದೂರಿದರು.
ಆದಕಾರಣ ಈ ಸಾರ್ವಜನಿಕ ಉದ್ಯಾನವನಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಸಿಬ್ಬಂದಿಗಳ ನೇಮಕ, ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿ ಹೈಟೆಕ್ ಉದ್ಯಾನವನಾಗಿ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಂಗಿ ಮುನಿರೆಡ್ಡಿ, ಕಾರ್ಯದರ್ಶಿ ಜಿತೇಂದ್ರ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಎಲ್ ರಂಗಪ್ಪ, ಎನ್ ಎಸ್ ಬಾಲು, ನರಸಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.