ಸಾರ್ವಜನಿಕ ಆಸ್ಪತ್ರೆಯ ಹೊರರೋಗಿಗಳ ನೋಂದಣಿ ವಿಭಾಗಕ್ಕೆ ಚಾಲನೆ

ಕೆ.ಆರ್.ಪೇಟೆ, ನ.08: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯು ಮುಂದಿನ ದಿನಗಳಲ್ಲಿ ಇ-ಆಸ್ಪತ್ರೆಯಾಗಿ ಪರಿವರ್ತಿತವಾಗುತ್ತಿದ್ದು ನವೆಂಬರ್ ಮೂರರಂದು ಪ್ರಕ್ರಿಯೆಗಳು ಪ್ರಾರಂಭವಾಗಿ ಇಂದು ಅಧಿಕೃತವಾಗಿ ಹೊರರೋಗಿಗಳ ನೋಂದಣಿ ವಿಭಾಗಕ್ಕೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಜಿ.ಸಿ.ಶಿವಪ್ಪ ಚಾಲನೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇ-ಆಸ್ಪತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ಆಸ್ಪತ್ರೆಯ ಎಲ್ಲಾ ದಾಖಲಾತಿಗಳ ನಿರ್ವಹಣೆ ಮುಂದಿನ ದಿನಗಳಲ್ಲಿ ಸುಲಭವಾಗಲಿದ್ದು ಕಾಗದ ರಹಿತವಾಗಲಿದೆ, ಮೇಲಾಧಿಕಾರಿಗಳು ಐಡಿ ಮೂಲಕ ಕುಳಿತಲ್ಲೇ ಆಸ್ಪತ್ರೆಯ ದೈನಂದಿನ ಮಾಹಿತಿಗಳನ್ನು ಪಡೆಯಬಹುದಾಗಿದೆ. ರೋಗಿಯು ರಾಜ್ಯದ ಯಾವುದೇ ಆಸ್ಪತ್ರೆಗೆ ಹೋಗಿ ನಿರ್ದಿಷ್ಟಪಡಿಸಿದ ಸಂಖ್ಯೆಯನ್ನು ತಿಳಿಸಿದರೆ ರೋಗಿಯ ಆರೋಗ್ಯದ ಸಂಪೂರ್ಣ ಮಾಹಿತಿ ತಿಳಿಯುತ್ತದೆ.
ಆಸ್ಪತ್ರೆಗೆ ಆಗಮಿಸುವ ರೋಗಿಗಳು ಹೊರ ರೋಗಿಗಳಾಗಿ ದಾಖಲು ಮಾಡುವ ಸಮಯದಲ್ಲಿಯೇ ಅವರ ಸಂಪೂರ್ಣ ಮಾಹಿತಿಯನ್ನು ಗಣಕಯಂತ್ರಕ್ಕೆ ಅಳವಡಿಸಲಾಗುವುದು ಮತ್ತು ಅವರಿಗೆ ಒಂದು ನಿರ್ದಿಷ್ಟ ಸಂಖ್ಯೆಯನ್ನು (ವಿಶಿಷ್ಟ ಗುರುತಿನ ನಂಬರ್ ) ನೀಡಲಾಗುವುದು. ನಂತರ ಸದರಿ ರೋಗಿಯು ಯಾವ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾನೆ, ಯಾವ ಔಷಧಿ ಹಾಗೂ ಮಾತ್ರೆಗಳನ್ನು ನೀಡಲಾಗಿದೆ, ಎಂಬ ಸಂಪೂರ್ಣ ಮಾಹಿತಿಯನ್ನು ಸಂಬಂಧಿಸಿದ ವೈದ್ಯರು ದಾಖಲು ಮಾಡುತ್ತಾರೆ, ಹೀಗೆ ಆಸ್ಪತ್ರೆಯ ರೋಗಿಗಳ ಸೇವಾಶುಲ್ಕ, ತುರ್ತು ಚಿಕಿತ್ಸೆ, ಪ್ರಯೋಗಶಾಲೆ, ಒಳ ರೋಗಿಗಳ ವಿಬಾಗಗಳಾದ ಕಣ್ಣು, ದಂತ, ಮೂಳೆ, ಮಕ್ಕಳ ವಿಭಾಗ, ಇಎನ್‍ಟಿ, ಶಸ್ತ್ರಚಿಕಿತ್ಸೆ, ಸ್ತ್ರೀರೋಗ, ಹೆರಿಗೆ, ಔಷಧಿ ದಾಸ್ತಾನು, ಐಸಿಟಿಸಿ, ಡಯಾಲಿಸಿಸ್, ಆಯುಷ್, ಸೇರಿದಂತೆ ಹಲವಾರು ವಿಬಾಗಗಳಲ್ಲಿ ಯಾವುದೇ ಚಿಕಿತ್ಸೆ ಪಡೆದರೂ ಅದು ತಂತ್ರಾಂಶದಲ್ಲಿ ದಾಖಲಾಗುತ್ತದೆ. ಮುಂದಿನ ಬಾರಿ ಬಂದಾಗ ರೋಗಿಯ ಸಂಖ್ಯೆ ನಮೂದಿಸಿದರೆ ಎಲ್ಲಾ ವಿವರವೂ ಕಂಪ್ಯೂಟರ್ ಪರದೆಯ ಮೇಲೆ ಬರಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಶ್ರೀಕಾಂತ್, ಫಾರ್ಮಸಿ ಅಧಿಕಾರಿ ಬಿ.ಎಸ್.ಸತೀಶ್ ಬಾಬು. ಐಸಿಟಿಸಿ ವಿಭಾಗದ ಕೌನ್ಸಿಲರ್ ಎಂ.ಸತೀಶ್, ಡಿ.ಇ.ಓ ಗಳಾದ ಶಾಂತ, ಸೌಮ್ಯ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಹಾಜರಿದ್ದರು.

ಆಸ್ಪತ್ರೆಯ ನಿರ್ವಹಣೆ, ರೋಗಿಯು ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ ಆಗುವವರೆಗೂ ನೀಡಿರುವ ಚಿಕಿತ್ಸೆ, ಔಷಧಿ, ಸರ್ಕಾರದ ಸಹಾಯಧನಗಳನ್ನು ಪಡೆಯುವಿಕೆ, ಮುಂತಾದ ಸಂಪೂರ್ಣವಿವರಗಳನ್ನು ತಂತ್ರಾಂಶದಲ್ಲಿ ದಾಖಲು ಮಾಡುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಕಾರ್ಪೊರೇಟ್ ಆಸ್ಪತ್ರೆಗಳಿಗೆ ಸರಿಸಮನಾದ ತಾಂತ್ರಿಕ ಅಂಶಗಳನ್ನು ಒಳಗೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ.

  • ಡಾ.ಜಿ.ಸಿ.ಶಿವಪ್ಪ. ಮುಖ್ಯ ಆಡಳಿತ ವೈದ್ಯಾಧಿಕಾರಿ. ಸಾರ್ವಜನಿಕ ಆಸ್ಪತ್ರೆ. ಕೆ.ಆರ್.ಪೇಟೆ.