ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ-ಡೈಮರ್ ಫಾಸ್ಟ್ ಟೆಸ್ಟ್‍ಗೆ ಚಾಲನೆ

ಪಿರಿಯಾಪಟ್ಟಣ: ಜೂ.09: ಕೊರೊನಾ ಸೋಂಕು ಉಲ್ಬಣ ಗೊಂಡಿರುವ ರೋಗಿಗಳ ಬಳಕೆಗಾಗಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ-ಡೈಮರ್ ಫಾಸ್ಟ್ ಟೆಸ್ಟ್ ಕಿಟ್ ಪರೀಕ್ಷೆಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ-ಡೈಮರ್ ಫಾಸ್ಟ್ ಟೆಸ್ಟ್ ಕಿಟ್ ಪರೀಕ್ಷೆಗೆ ಚಾಲನೆ ನೀಡಿ ಅವರು ಮಾತನಾಡಿದರು, ಈಗಾಗಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ, ಈಚೆಗೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊರೋನಾ ಸೋಂಕಿತರ ಪರೀಕ್ಷೆಗಾಗಿ ಡಿ-ಡೈಮರ್ ಯಂತ್ರ ಖರೀದಿಸುವಂತೆ ಆಡಳಿತಾಧಿಕಾರಿ ಡಾ.ಜೆ.ಶ್ರೀನಿವಾಸ್ ಮನವಿ ಮಾಡಿದ್ದರು, ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಖರೀದಿಗೆ ಸೂಚಿಸಲಾಗಿತ್ತು, ಆಮ್ಲಜನಕ ಪ್ರಮಾಣ ಕಡಿಮೆ ಇರುವ ಸೋಂಕಿತ ವ್ಯಕ್ತಿಗಳನ್ನು ಮಾತ್ರ ಪರೀಕ್ಷೆ ಮಾಡಲು ಈ ಯಂತ್ರ ಬಳಸಬಹುದಾಗಿದ್ದು ಪ್ರತಿ ವ್ಯಕ್ತಿಯ ಪರೀಕ್ಷೆಗೆ ರೂ. 400 ರಿಂದ 500 ರ ವರೆಗೆ ಖರ್ಚು ತಗಲುವುದಾಗಿ ತಿಳಿಸಿದ್ದರು ಆದರೆ ತಾಲ್ಲೂಕಿನ ಜನತೆಯ ಹಿತದೃಷ್ಟಿಯಿಂದ ಉಚಿತವಾಗಿ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ ಎಂದರು.
ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜೆ.ಶ್ರೀನಿವಾಸ್ ಮಾತನಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಡಿ-ಡೈಮರ್ ಫಾಸ್ಟ್ ಟೆಸ್ಟ್ ಕಿಟ್ ಪರೀಕ್ಷೆಗೊಳಪಡಲು ರೂ.2 ಸಾವಿರ ವರೆಗೆ ಖರ್ಚು ತಗಲುತ್ತಿತ್ತು ಆದರೆ ಶಾಸಕರ ಅಧ್ಯಕ್ಷತೆಯ ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಡಿ-ಡೈಮರ್ ಫಾಸ್ಟ್ ಟೆಸ್ಟ್ ಕಿಟ್ ಅನ್ನು ತಾಲ್ಲೂಕು ಆಸ್ಪತ್ರೆಗೆ ಖರೀದಿಸಿದ್ದು ಕೊರೊನಾ ಸೋಂಕು ಉಲ್ಬಣಗೊಂಡಿರುವವರ ಪರೀಕ್ಷೆಗೆ ಸಹಾಯವಾಗಲಿದೆ, ಶಾಸಕರ ಆದೇಶದಂತೆ ಉಚಿತವಾಗಿ ತಪಾಸಣೆ ಮಾಡಲು ಸೂಚಿಸಲಾಗಿದೆ ಎಂದರು.
ವೈದ್ಯಾಧಿಕಾರಿ ಡಾ.ಸದಾಶಿವ್ ಮಾತನಾಡಿ ಕೊರೊನಾ ಸೋಂಕಿತರಿಗೆ ಉಸಿರಾಟದ ಸಮಸ್ಯೆ ಉಲ್ಬಣಗೊಂಡಾಗ ಶ್ವಾಸಕೋಶದಲ್ಲಿನ ಸಮಸ್ಯೆಗಳನ್ನು ತಿಳಿಯಲು ಡಿ-ಡೈಮರ್ ಫಾಸ್ಟ್ ಟೆಸ್ಟ್ ಕಿಟ್ ಬಳಸಲಾಗುತ್ತದೆ, ಕೊರೊನಾ ಸೋಂಕಿತರೆಲ್ಲರನ್ನು ಪರೀಕ್ಷೆಗೊಳಪಡಿಸಲು ಈ ಯಂತ್ರ ಬಳಸಲಾಗುವುದಿಲ್ಲ, ಅತಿ ತುರ್ತು ಪರಿಸ್ಥಿತಿಯಲ್ಲಿ ಶ್ವಾಸಕೋಶ ಸಮಸ್ಯೆ ಎದುರಾದವರು ಮಾತ್ರ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.
ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ವೈದ್ಯಾಧಿಕಾರಿಗಳಾದ ಡಾ.ಪ್ರಭು, ಡಾ.ಮಹದೇವಸ್ವಾಮಿ, ಡಾ.ದೇವಿಕಾ, ಡಾ.ಚಂದ್ರಾವತಿ ರೇಡಿಯೋಜಲಿಸ್ಟ್ ಡಾ.ವಿಕ್ರಂ, ಲ್ಯಾಬ್ ಟೆಕ್ನಿಷಿಯನ್ ಗಳಾದ ನಾಗರಾಜ್, ವೀರೇಶ್, ತೇಜಸ್ ಮತ್ತಿತರರಿದ್ದರು.