ಸಾರ್ವಜನಿಕ ಆಸ್ತಿ ರಕ್ಷಣೆ ನಮ್ಮ ಹೊಣೆ

ಸಿಂಧನೂರು,ಆ.೧೯-
ಸಾರ್ವಜನಿಕ ಕಟ್ಟಡ, ಕೆರೆ ಕಟ್ಟೆಗಳ ಸಂರಕ್ಷಣೆ, ಪರಿಸರ ಸ್ವಚ್ಚತೆ, ಅಂತರ್ಜಲ ಅಭಿವೃದ್ಧಿ, ದೇಶದ ನಾಗರಿಕರಾದ ನಮ್ಮೆಲ್ಲರ ಜವಾಬ್ದಾರಿ ಎಂದು ತಾಲೂಕಿನ ದುಗ್ಗಮ್ಮನಗುಂಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಶಂಕರ ದೇವರ ಹೀರೆಮಠ ಹೇಳಿದರು. ಅವರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಏರ್ಪಡಿಸಿದ್ದ ಸಾರ್ವಜನಿಕ ಸೌಕರ್ಯಗಳು ಮತ್ತು ನನ್ನ ಜವಾಬ್ದಾರಿ ವಿಷಯ ಕುರಿತಂತೆ ನಡೆದ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿ ೨ನೇ ಶನಿವಾರ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮ ಇದಾಗಿದ್ದು, ಉತ್ತಮ ಪ್ರಜೆಯಾಗುವ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಸಾರ್ವಜನಿಕ ಆಸ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು ಹಾಗೂ ಸಾರ್ವಜನಿಕ ಆಸ್ತಿಗಳ ಮಹತ್ವ ಕುರಿತಂತೆ ಜನಜಾಗೃತಿ ಮೂಡಿಸಬೇಕೆಂದು ಹೇಳಿದರು.
ಗ್ರಾಮ ಪಂಚಾಯಿತಿ, ಶಾಲಾ ಕಟ್ಟಡ, ಬಸ್ ನಿಲ್ದಾಣ, ಗ್ರಂಥಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಬಹುತೇಕ ಸರ್ಕಾರಿ ಆಸ್ತಿಗಳನ್ನು ಸಂರಕ್ಷಿಸುವಲ್ಲಿ ನಾವು ಉತ್ತಮ ನಾಗರಿಕರಾಗಿ ನಡೆದುಕೊಳ್ಳಬೇಕೆಂದು ಸಹ ಶಿಕ್ಷಕ ವಿರೂಪಾಕ್ಷಪ್ಪ ಫಕೀರಪುರ ತಿಳಿಸಿದರು.
ಈ ವಿಷಯ ಕುರಿತಂತೆ ಏರ್ಪಡಿಸಿದ್ದ ಚರ್ಚಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.