ಸಾರ್ವಜನಿಕರ ಸಮಸ್ಯೆ ಆಲಿಸಿದ ಡಿಸಿ ಅಕ್ರಂಪಾಷ

ಕೋಲಾರ,ಆ.೧-ಜಿಲ್ಲಾಧಿಕಾರಿ ಅಕ್ರಂಪಾಷ ಭಾನುವಾರವೂ ಕೋಲಾರ ನಗರ ಸೇರಿದಂತೆ ವೇಮಗಲ್, ನರಸಾಪುರ ಮುಂತಾದ ಕಡೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ನಂತರ ಸಮಸ್ಯೆಗಳ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದ್ದಾರೆ.
ಭಾನುವಾರ ಬೆಳ್ಳಗ್ಗೆ ನಗರದ ರಹಮತ್ ನಗರ, ಮಿಲತ್ ನಗರ ಹಾಗೂ ಅಂತರಗಂಗೆ ರಸ್ತೆಗೆ ಭೇಟಿ ನೀಡಿ ಅಲ್ಲಿನ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ನಂತರ ಚರಂಡಿಗಳ ಸ್ವಚ್ಚತೆ ಮತ್ತು ಕಸ ವಿಲೇವಾರಿ ಮಾಡುವಂತೆ ನಗರಸಭೆ ಆಯುಕ್ತ ಶಿವಾನಂದ್‌ರಿಗೆ ಸೂಚಿಸಿದ್ದಾರೆ.
ರಹಮತ್ ನಗರ ಮತ್ತು ಮಿಲತ್ ನಗರಗಳಲ್ಲಿ ಚರಂಡಿಗಳು ಸ್ವಚ್ಚತೆಗೊಳ್ಳದೆ ಹಾಗೂ ರಸ್ತೆಗಳಲ್ಲಿ ಕಸದ ರಾಶಿಗಳು ಬಿದ್ದಿರುವುದನ್ನು ಸಾರ್ವಜನಿಕರು ಜಿಲ್ಲಾಧಿಕಾರಿ ಗಮನಕ್ಕೆ ತಂದರು, ಹಾಗು ರಸ್ತೆಗಳಲ್ಲಿ ಬಿದ್ದಿರುವ ಹಳ್ಳ ಕೊಳ್ಳಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ಸಾರ್ವಜನಿಕರು ತಂದು ಮಳೆಗಾಲ ಪ್ರಾರಂಭವಾಗಿದೆ, ಮಳೆ ಬಂದರೆ ಈ ರಸ್ತೆಗಳಲ್ಲಿ ನಾವು ಓಡಾಡುವುದು ಹೇಗೆ? ಹಳ್ಳ ಯಾವುದೇ ರಸ್ತೆ ಯಾವುದೆ ಎಂಬುದೆ ತಿಳಿಯುತ್ತಿಲ್ಲ, ಚರಂಡಿಗಳಲ್ಲಿ ಇರುವ ಕಸ ರಸ್ತೆಗಳ ಮೇಲೆ ಬರುತ್ತದೆ, ಮಳೆ ಹೆಚ್ಚಾದರೆ ಈ ಕಸ ಮನೆಗಳ ಒಳಗೂ ನುಗ್ಗುತ್ತದೆ ಎಂದು ಜಿಲ್ಲಾಧಿಕಾರಿ ಬಳಿ ಸಮಸ್ಯೆಗಳನ್ನು ಸಾರ್ವಜನಿಕರು ತೋಡಿಕೊಂಡರು.
ಪ್ರತಿ ದಿನ ನಗರ ಪ್ರದರ್ಶನ ಮಾಡುತ್ತಾ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ, ನಗರ ಸಭೆಯಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ ಹೊಸ ಸಿಬ್ಬಂದಿ ನೇಮಕಾತಿ ಮತ್ತು ಹೊರ ಗುತ್ತಿಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ, ಹಂತ ಹಂತವಾಗಿ ಮಳೆಗಾಲದೊಳಗೆ ಚರಂಡಿಗಳನ್ನು ಸ್ವಚ್ಚಗೊಳಿಸಲಾಗುವುದು, ಮಳೆನೀರು ನಿಲ್ಲದಂತೆ ಸರಾಗವಾಗಿ ಹೋಗಲು ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಭರವಸೆ ನೀಡಿದರು.