ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಅಧಿಕಾರಿಗಳಿಗೆ ಅಧ್ಯಕ್ಷೆ ಶಾರದಾಬಾಯಿ ಕರೆ

ಕೂಡ್ಲಿಗಿ.ನ. 10:- ಕೂಡ್ಲಿಗಿ ಪಟ್ಟಣದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಹಾಗೂ ಅವರೊಂದಿಗೆ ಸೌಜನ್ಯವಾಗಿ ವರ್ತಿಸಬೇಕೆಂದು ಪಟ್ಟಣ ಪಂಚಾಯತಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನೂತನ ಅಧ್ಯಕ್ಷೆ ಶಾರದಾಬಾಯಿ ತಿಳಿಸಿದರು.
ಅವರು ಸೋಮವಾರ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ನಂತರ ಮೊದಲ ಅಧಿಕಾರಿ, ಸಿಬ್ಬಂದಿಗಳ ಸಭೆ ಕರೆದು ಮಾತನಾಡುತ್ತ ಪಟ್ಟಣದ ಅಭಿವೃದ್ಧಿಗೆ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ತಿಳಿಸುತ್ತ ಖಾತಾ ಬದಲಾವಣೆ, ಜನನ ಮರಣ ಪ್ರಮಾಣಪತ್ರ, ಸೇರಿದಂತೆ ಪಟ್ಟಣದ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರ ಸಮಸ್ಯೆ ಆಲಿಸಿ ಅದಕ್ಕೆ ಸ್ಪಂದಿಸಬೇಕು ಚಳಿ ಮಳೆ ಎನ್ನದೆ ನಿತ್ಯಕಾಯಕದಲ್ಲಿ ತೊಡಗುವ ಪೌರಕಾರ್ಮಿಕರಿಗೆ ನೀಡುವ ಕೈ ಗ್ಲೋಸ್ ಮತ್ತು ಜಾಕೆಟ್ ಸಮವಸ್ತ್ರ ಇದುವರೆಗೂ ನೀಡಿಲ್ಲವಾಗಿದ್ದು ಅದನ್ನು ಕಾರ್ಮಿಕರಿಗೆ ನೀಡುವಂತೆ ಅಧಿಕಾರಿ ವರ್ಗಕ್ಕೆ ತಿಳಿಸಲಾಯಿತು ಹಾಗೂ ಚಳಿ ಮಳೆ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಸುರಕ್ಷಿತ ಜರ್ಕಿನ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ತಿಳಿಸಿದರು ಅದಕ್ಕೆ ಸದಸ್ಯೆ ರೇಣುಕಾ ದುರುಗೇಶ ಧ್ವನಿಗೂಡಿಸಿದರು ಮತ್ತು ಉಳಿದ ಸದಸ್ಯರು ಸಮ್ಮತಿ ನೀಡಿದರು.
ಸಾರ್ವಜನಿಕರೊಂದಿಗೆ ಸ್ಪಂದಿಸದ ಹಾಗೂ ಜನರಿಗೆ ತೊಂದರೆಯಾಗುವಂತೆ ನಡೆದುಕೊಳ್ಳುವ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮುಖ್ಯಾಧಿಕಾರಿಗೆ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಸದಸ್ಯರು ತಿಳಿಸಿದರು ಕೆಲವು ವಾರ್ಡ್ ಗಳಲ್ಲಿ ಡ್ಯಾಮ್ ನೀರಿನ ವ್ಯವಸ್ಥೆ ಇಲ್ಲವಾಗಿದ್ದು ಅಲ್ಲಿ ಡ್ಯಾಮ್ ನೀರು ಕಲ್ಪಿಸಬೇಕೆಂದು ಸದಸ್ಯರು ತಿಳಿಸಿದರು ಮತ್ತು ಬೋರ್ ವೆಲ್ ರಿಪೇರಿ ಹಾಗೂ ಇತರ ರಿಪೇರಿ ಸಾಮಗ್ರಿಗಳನ್ನು ಟೆಂಡರ್ ದಾರರು 3ತಿಂಗಳ ಅವಧಿ ತೆಗೆದುಕೊಳ್ಳದೆ ಪದೇ ಪದೇ ರಿಪೇರಿ ಖರ್ಚು ಹಾಕುತ್ತಿದ್ದರೆಂದು ಗಮನಕ್ಕೆ ಬಂದಿದ್ದು ಅದರ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದು ಬಂದಲ್ಲಿ ಮುಲಾಜಿಲ್ಲದೆ ಟೆಂಡರ್ ರದ್ದುಗೊಳಿಸುವ ತೀರ್ಮಾನಕ್ಕೆ ಮುಂದಾಗುವುದಾಗಿ ಸದಸ್ಯರೆಲ್ಲರೂ ಒಮ್ಮತದ ತೀರ್ಮಾನದ ವಿಷಯ ತಿಳಿಸಿದರು.
ಕೂಡ್ಲಿಗಿ ಸಂತೆ ಮೈದಾನದಲ್ಲಿ ತರಕಾರಿ ಸಂತೆಯಂತೆ ದನ ಕುರಿ ವ್ಯಾಪಾರದ ಮಾರ್ಕೆಟ್ ನಿರ್ಮಿಸಬೇಕು ಎಂದು ಇದೆ ಸಂದರ್ಭದಲ್ಲಿ ಅಧ್ಯಕ್ಷ ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು ಇದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದೆಂದು ಅಧ್ಯಕ್ಷ ಉಪಾಧ್ಯಕ್ಷರು ತಿಳಿಸಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಸದಸ್ಯರು ಮೊದಲ ಸಭೆಯನ್ನು ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ಪಟ್ಟಣ ಪಂಚಾಯತಿ ಅಧಿಕಾರಿ ಸಿಬ್ಬಂದಿಗಳ ಸಭೆ ನಡೆಸಲಾಯಿತು ಹಾಗೂ ಮದ್ಯಾಹ್ನ 3ಗಂಟೆಯಿಂದ ಸಂಜೆ 6ಗಂಟೆವರೆಗೆ ಪೌರಕಾರ್ಮಿಕರರ ಸಭೆ ನಡೆಸಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಊರಮ್ಮ ಮುಖ್ಯಾಧಿಕಾರಿ ಫಕ್ರುದ್ದಿನ್ ಹಾಗೂ ಬಿಜೆಪಿ, ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರು ಹಾಜರಿದ್ದು ಕಾಂಗ್ರೆಸ್ ಸದಸ್ಯರು ಗೈರಾಗಿದ್ದರು ಎಂದು ಪಟ್ಟಣ ಪಂಚಾಯತಿ ಮೂಲಗಳಿಂದ ತಿಳಿದಿದೆ.