ಸಾರ್ವಜನಿಕರ ದೂರಿನ ವಿಳಂಬ ಸಲ್ಲದು

ಕುಣಿಗಲ್, ಆ. ೧೨- ಸಾರ್ವಜನಿಕರಿಂದ ದೂರು ಬಂದಾಗ ವಿಳಂಬ ಮಾಡದೆ ಆದ್ಯತೆ ಮೇರೆಗೆ ಶೀಘ್ರ ವಿಲೇವಾರಿ ಮಾಡಬೇಕು. ಕಚೇರಿಗೆ ಅಲೆಸಬಾರದು. ಒಂದು ವೇಳೆ ವಿನಾಕಾರಣ ವಿಳಂಬ ಮಾಡಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಉಪಕಾರ್ಯದರ್ಶಿ ಹಾಗೂ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ನರಸಿಂಹಮೂರ್ತಿ ಹೇಳಿದರು.
ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರಗಾಲವಾದ್ದರಿಂದ ನರೇಗಾ ಯೋಜನೆ ಅನುಷ್ಠಾನಗೊಳಿಸುವ ಮೂಲಕ ರೈತರಿಗೆ ನೆರವಾಗಿ, ಮಳೆಯಾಗದೆ ಬರಗಾಲ ಬರುವಂತಾಗಿದೆ. ಬಿತ್ತನೆ ಕಾರ್ಯವಾಗಿಲ್ಲ, ಬಿತ್ತನೆಯಾದ ಬೆಳೆಗೆ ಮಳೆ ಇಲ್ಲ, ರೈತರು ಕಂಗಾಲಾಗಿದ್ದಾರೆ, ಸರ್ಕಾರದ ಯೋಜನೆಗಳು ಜನರಿಗೆ ತಲಪುವಂತಾಗಬೇಕು ಎಂದರು.
ಕಚೇರಿ ಆವರಣ ಸ್ವಚ್ಚವಾಗಿರಲಿ ಬರುವ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ನೀಡಿ, ಬಂದವರನ್ನು ಗೌರವಯುತವಾಗಿ ಕಂಡು ಅವರ ಸಮಸ್ಯೆಗೆ ಸ್ಪಂದಿಸಿ ರೇಷ್ಮೆ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ನರೇಗಾ ಯೋಜನೆ ಅನುಷ್ಠಾನವಾಗುತ್ತಿಲ್ಲ. ವಿಳಂಬ ಮಾಡದೆ ಶೀಘ್ರ ಅನುಷ್ಠಾನಗೊಳಿಸಿ ಎಂದು ಸಲಹೆ ನೀಡಿದರು.
ಇ.ಒ. ಜೋಸೇಫ್ ಮಾತನಾಡಿ, ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಸುಣ್ಣ ಬಣ್ಣ ಕಂಡು ಎಷ್ಟು ವರ್ಷವಾಗಿದೆ, ಸ್ವಚ್ಚತೆಯಲ್ಲೂ ಉದಾಸೀನತೆ, ಶವಗಾರದ ಹತ್ತಿರ ಹೋಗಲು ಮುಜುಗರವಾಗುತ್ತದೆ, ಆಸ್ಪತ್ರೆಗಳಲ್ಲೇ ಸ್ವಚ್ಚತೆ ಇಲ್ಲದಿದ್ದರೆ ಜನರ ಗತಿ ಏನು ಎಂದು ಅಸಮಧಾನ ವ್ಯಕ್ತಪಡಿಸಿ ಬರುವ ರೋಗಿಗಳಿಗೆ ಔಷಧಿ ಕೊರತೆಯಾಗದಂತೆ ನೋಡಿಕೊಳ್ಳಿ ಎಂದರು.
ಕೃಷಿ ಇಲಾಖೆ ಮತ್ತು ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಗಳಿಲ್ಲ. ಯೋಜನೆಗಳ ಅನುಷ್ಠಾನಕ್ಕೆ ಕೊರತೆ ಎದುರಾಗಿದೆ ಎಂದು ಇಲಾಖಾಧಿಕಾರಿಗಳು ಸಭೆಯಲ್ಲಿ ಅಸಹಾಯಕತೆ ತೋಡಿಕೊಂಡರು.
ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.