ಕೋಲಾರ,ಜು,೧೩-ಸಾರ್ವಜನಿಕರು ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕೆಂದು ಜಿಲ್ಲಾಕಾರಿಗಳು ಸೂಚನೆ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಕಡತಗಳ ಶೀಘ್ರ ವಿಲೇವಾರಿಗೆ ಕ್ರಮವಹಿಸಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಎಚ್.ಎಸ್.ವೆಂಕಟಲಕ್ಷ್ಮೀ ತಿಳಿಸಿದರು.
ನಗರದ ಉಪವಿಭಾಗದ ಕಚೇರಿಯಲ್ಲಿ ಕಡತ ಅಭಿಯಾನದಲ್ಲಿ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡುವುದಾಗಿ ಹಣ ಪಡೆಯುವ ದಲ್ಲಾಳಿಗಳಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು, ಕೋಲಾರ ಉಪ ವಿಭಾಗದಲ್ಲಿ ಐದು ಸಾವಿರಕ್ಕೂ ಹೆಚ್ಚಿನ ಪ್ರಕರಣಗಳಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ನ್ಯಾಯಾಲಯದಲ್ಲಿರುವ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ ನೀಡುವಂತೆ ಜಿಲ್ಲಾಕಾರಿ ತಿಳಿಸಿದ್ದು, ಅದರಂತೆ ಪ್ರಕರಣಗಳ ಶೀಘ್ರ ವಿಲೇವಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಆರ್‌ಆರ್‌ಟಿ ಪ್ರಕರಣಗಳಿಗೆ ಸಂಬಂಧಿಸಿದಂತೆ ೧೦೦ ಪ್ರಕರಣಗಳು ಹಾಗೂ ೬ ಪಿಟಿಸಿಎಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಥಳದಲ್ಲಿಯೇ ವಿಲೇವಾರಿ ಮಾಡಿದ ಎಸಿ ಸಂಬಂಧಿಸಿದವರಿಗೆ ಆದೇಶ ಪ್ರತಿ ನೀಡಿದರು. ಹಲವು ವರ್ಷಗಳಿಂದ ಬಾಕಿಯಿದ್ದ ಪ್ರಕರಣಗಳು ಇತ್ಯರ್ಥವಾದ ಹಿನ್ನಲೆಯಲ್ಲಿ ಅಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸಿ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಿಕೊಡುತ್ತೇವೆಂದು ಅಧಿಕಾರಿಗಳ ಹೆಸರೇಳಿ ಯಾರಾದರೂ ಹಣಕ್ಕೆ ಬೇಡಿಕೆಯಿಟ್ಟರೆ, ಸಾರ್ವಜನಿಕರು ಸಂಬಂಧಿಸಿದ ಅಕಾರಿಗಳ ಗಮನಕ್ಕೆ ತರುವ ಜತೆಗೆ ಲೋಕಾಯುಕ್ತರಿಗೂ ದೂರು ನೀಡಲು ಮುಂದಾಗಬೇಕು. ಇದರಿಂದಾಗಿ ಅಮಾಯಕರು ಹಣ ಕಳೆದುಕೊಳ್ಳುವುದು ತಪ್ಪುತ್ತದೆ ಎಂದು ಸಹಾಯಕ ಆಯುಕ್ತರು ತಿಳಿಸಿದರು.