ಸಾರ್ವಜನಿಕರ ಅಹವಾಲುಗಳಿಗೆ ಸಚಿವ ಪ್ರಭು ಚವ್ಹಾಣ ಸ್ಪಂದನೆ

ಔರಾದ :ಜು.26: ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ ಅವರು ಜುಲೈ 25ರಂದು ಔರಾದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಅಹವಾಲು ಸ್ವೀಕಾರ ಸಭೆ ನಡೆಸಿ ಔರಾದ ಹಾಗೂ ಕಮಲನಗರ ತಾಲ್ಲೂಕಿನ ಜನತೆಯಿಂದ ನಾನಾ ರೀತಿಯ ಅಹವಾಲುಗಳನ್ನು ಆಲಿಸಿದರು.

ಎಲ್ಲರ ಅಹವಾಲುಗಳನ್ನು ಸಮಚಿತ್ತದಿಂದ ಆಲಿಸಿದ ಸಚಿವರು, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಮೂಲಕ ಸಮಸ್ಯೆ ಹೇಳಿಕೊಂಡು ಬಂದವರ ಮುಖದಲ್ಲಿ ಮಂದಹಾಸ ಮೂಡಿಸಿದರು.

ಔರಾದ್ ಪಟ್ಟಣದ ಕೆಲವೆಡೆ ಪಟ್ಟಣ ಪಂಚಾಯಿತಿಯ ಸಿಬ್ಬಂದಿ ಸ್ವಚ್ಛತಾ ಕಾರ್ಯ ಕೈಗೊಂಡು ರಸ್ತೆಯ ಮೇಲೆಯೇ ಕಸವನ್ನು ಸುಡುತ್ತಿರುವುದು ಕಂಡು ಬಂದಿದೆ ಎಂದು ಸಾರ್ವಜನಿಕರೊಬ್ಬರು ತಿಳಿಸಿದಾಗ, ಸಚಿವರು ಪ್ರತಿಕ್ರಿಯಿಸಿ, ಕಸವನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಪಟ್ಟಣದಾದ್ಯಂತ ಸ್ವಚ್ಛತಾ ಕೆಲಸ ಮತ್ತು ಫಾಗಿಂಗ್ ಮಾಡಿಸಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಸ್ಥರಿಗೆ ಸೂಚಿಸಿದರು.

ಎರಡು ತಿಂಗಳಿನಿಂದ ವೃದ್ಧಾಪ್ಯ ವೇತನ ಬರುತ್ತಿಲ್ಲ ಎಂದು ವೃದ್ಧರೊಬ್ಬರು ಸಮಸ್ಯೆ ಹೇಳಿಕೊಂಡಾಗ ತಕ್ಷಣ ಸಮಸ್ಯೆ ಇತ್ಯರ್ಥಪಡಿಸಿ ವೃದ್ಧಾಪ್ಯ ವೇತನ ಸಿಗುವಂತೆ ಮಾಡಬೇಕೆಂದು ತಹಸೀಲ್ದಾರರಿಗೆ ಸೂಚಿಸಿದರು. ಅಲ್ಲದೇ ಔರಾದ ವಿಧಾನಸಭಾ ಕ್ಷೇತ್ರದಲ್ಲಿ ವಿಧವಾ ವೇತನ, ವಿಕಲಚೇತನರ ವೇತನ ಮತ್ತು ವೃದ್ದಾಪ್ಯ ವೇತನ ಪಡೆಯುತ್ತಿರುವ ಫಲಾನುಭವಿಗಳಿಗೆ ಕಛೇರಿಗಳಿಗೆ ಅಲೆದಾಡಿಸಬಾರದು. ಸಮಯಕ್ಕೆ ಸರಿಯಾಗಿ ವೇತನ ಸಿಗುವಂತೆ ನೋಡಿಕೊಳ್ಳಬೇಕೆಂದು ತಹಸೀಲ್ದಾರರಿಗೆ ತಿಳಿಸಿದರು.

ಈ ವೇಳೆ ಸಚಿವರು ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾಲ್ಲೂಕು ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾದ ಎಲ್ಲ ಅಹವಾಲು ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ನಾಗೂರ(ಬಿ)ಯಲ್ಲಿ 5 ಲಕ್ಷ ಪರಿಹಾರ ವಿತರಣೆ: ಸಾರ್ವಜನಿಕರ ಅಹವಾಲು ಸ್ವೀಕಾರದ ನಂತರ ಸಚಿವರು ಔರಾದ ತಾಲ್ಲೂಕಿನ ನಾಗೂರ(ಬಿ) ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದಲ್ಲಿ ಇತ್ತೀಚೆಗೆ ಸುರಿದ ವಿಪರೀತ ಮಳೆಯಿಂದಾಗಿ ನೀರಿನ ರಭಸಕ್ಕೆ ಸಿಲುಕಿ ಮೃತಪಟ್ಟಿದ್ದ ಶ್ರೀಮತಿ ಸುಮನಬಾಯಿ ಬಾಬುರೆಡ್ಡಿ ಅವರ ಮನೆಗೆ ತೆರಳಿ, ಕುಟುಂಬಸ್ಥರಿಗೆ ಸರ್ಕಾರದ 5 ಲಕ್ಷ ಮೊತ್ತದ ಪರಿಹಾರಧನದ ಚೆಕ್ ಹಸ್ತಾಂತರಿಸಿದರು.
ಕೆಲವು ದಿನಗಳ ಹಿಂದೆ ಸಚಿವರು ಮೃತರ ಕುಟುಂಬಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿದ್ದರಲ್ಲದೇ ವೈಯಕ್ತಿಕ ಸಹಾಯಧನ ಮಾಡಿದ್ದರು. ಇದೀಗ ಸರ್ಕಾರದ 5 ಲಕ್ಷ ರೂಪಾಯಿಯ ಪರಿಹಾರ ಧನದ ಚೆಕ್ ವಿತರಿಸಿ. ಸರ್ಕಾರದ ಪರಿಹಾರಧವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ ರಮೇಶ ಪೆದ್ದೆ, ಗ್ರೇಡ್-2 ತಹಸೀಲ್ದಾರ ಮಲಶೆಟ್ಟಿ ಚಿದ್ರೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿರೇಂದ್ರ ಸಿಂಗ ಠಾಕೂರ, ಬಿಜೆಪಿ ಔರಾದ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡ ಪ್ರಕಾಶ ಅಲ್ಮಾಜೆ, ಕೇರಬಾ ಪವಾರ, ಸಚಿನ್ ರಾಠೋಡ, ಶ್ರೀಮಂತ ಪಾಟೀಲ, ಶಿವಕುಮಾರ ಪಾಂಚಾಳ, ಹಣಮಂತ ಸುರನಾರ, ಖಂಡೋಬಾ ಕಂಗಟೆ ಸೇರಿದಂತೆ ಇತರರಿದ್ದರು.