ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಿ, ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲಿ:ಪ್ರಿಯಾಂಕ್ ಖರ್ಗೆ

ಕಲಬುರಗಿ,ಜೂ.20: ಕಲಬುರಗಿ ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮತ್ತು ಮರಳು ಸಂಗ್ರಹಣೆ ಮತ್ತು ಮಾರಾಟ, ಕ್ರಿಕೆಟ್ ಬೆಟ್ಟಿಂಗ್, ಗ್ಯಾಂಬ್ಲಿಂಗ್, ಚೈನ್ ಸ್ನ್ಯಾಚಿಂಗ್, ಕಳ್ಳತನ, ಗಾಂಜಾ ಮಾರಾಟ, ಸ್ಮಗ್ಲಿಂಗ್ ಇವೆಲ್ಲಕೂ ಕಡಿವಾಣ ಹಾಕಬೇಕು. ಠಾಣೆಗೆ ಬರುವ ಸಾರ್ವಜನಿರೊಂದಿಗೆ ಸಂಯಮದಿಂದ ವರ್ತಿಸಬೇಕು. ಒಟ್ಟಾರೆ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ, ಪೊಲೀಸ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪುಂಡ-ಪೋಕರಿಗಳು, ರೌಡಿಗಳನ್ನು ಮಟ್ಟ ಹಾಕಿ ಜನರ ನೆಮ್ಮದಿ ಜೀವನಕ್ಕೆ ಪೆÇಲೀಸ್ ಅಧಿಕಾರಿಗಳು ಕಾರಣಿಭೂತರಾಗಬೇಕು ಎಂದು ಎಚ್ಚರಿಕೆ ನೀಡಿದರು.
ರೌಡಿಗಳು ಪೊಲೀಸರಿಗೆ ನೋಡಿ ಹೆದರಬೇಕು. ಅದರ ಬದಲು ರೌಡಿಗಳ ಜೊತೆ ಪೊಲೀಸ್ ಅಧಿಕಾರಿಗಳು ಹುಟ್ದಬ್ಬ ಆಚರಿಸುವ ಕೆಟ್ಟು ಗೀಳು ಹುಟ್ಟುಕೊಂಡಿದೆ. ಈ ಮೂಲಕ ಸಮಾಜಕ್ಕೆ ಪೊಲೀಸ್ ಇಲಾಖೆಯಿಂದ ಯಾವ ರೀತಿಯ ಸಂದೇಶ ಹೋಗುತ್ತದೆ ಎಂಬುದು ನೀವು ಬಲ್ಲಿರಾ ಎಂದ ಸಚಿವರು, ರೌಡಿಗಳು, ಸಮಾಜ ಘಾತುಕರು ಖಾಕಿ ಕಂಡರೆ ಭಯ ಬರುವಂತೆ ನಿಮ್ಮ ಕೆಲಸದಲ್ಲಿ ಬದಲಾವಣೆ ತನ್ನಿ. ಇಲ್ಲ ಜಾಗ ಖಾಲಿ ಮಾಡಿ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ತಮ್ಮ ಹಾಗೂ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೆಸರಿನಲ್ಲಿ ಠಾಣೆಗಳಲ್ಲಿ ವಸೂಲಿ ಮಾಡಲಾಗುತ್ತಿದೆ ಎಂಬ ಮಾಹಿತಿ ಬಂದಿದ್ದು, ಈ ರೀತಿಯ ವಸೂಲಿಗೆ ಇಳಿದಿದಲ್ಲಿ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು.
ಗ್ರಾಮೀಣ ಭಾಗದಲ್ಲಿ ರಾಜಾರೋಷವಾಗಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಕಳ್ಳ ಭಟ್ಟಿ, ಅಕ್ರಮ ಸರಾಯಿ ಧಂಧೆ ನಡೆಯುತ್ತಿದೆ. ಇದೆಲ್ಲವು ಗೊತ್ತಿದ್ದು ಏಕೆ ಕೈಕಟ್ಟಿ ಕೂತಿದ್ದೀರಾ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತೆಯನ್ನು ಪ್ರಶ್ನಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಇನ್ನು ಮುಂದೆ ಇವೆಲ್ಲಕ್ಕು ಬ್ರೆಕ್ ನೀಡಬೇಕು. ಅಪ್ರಾಪ್ತ ಮಕ್ಕಳು ಮದ್ಯದಂಗಡಿಗೆ ಹೋಗಿ ಮದ್ಯ ತರುತ್ತಾರೆ ಎಂದರೆ ಜಿಲ್ಲೆಯಲ್ಲಿ ಯಾವ ರೀತಿಯಲ್ಲಿ ಆಡಳಿತ ನಡೆಯುತ್ತಿದೆ ಎಂದು ಖಾರವಾಗಿ ಪ್ರಶ್ನಿಸಿದರು.
ಕಲಬುರಗಿ ನಗರದಲ್ಲಿ ಹಾಡುಹಗಲೆ ಕೊಲೆ ನಡೆಯುತ್ತಿವೆ. ಇತ್ತೀಚೆಗೆ ಹಾಗರಗಾ ಕ್ರಾಸ್, ಬಸ್ ನಿಲ್ದಾಣದಲ್ಲಿ ಕೊಲೆ ಘಟನೆಗಳು ನಡೆದಿವೆ. ಜನ ಭಯಭೀತರಾಗಿದ್ದಾರೆ. ಇಂತಹ ಪುಂಡ-ಪೋಕರಿಗಳನ್ನು ಹೆಡೆ ಮುರಿ ಕಟ್ಟಿ ಕಂಬಿ ಒಳಗೆ ಹಾಕಬೇಕಾದ ಕೆಲಸ ಮೊದಲು ಮಾಡಬೇಕು. ನಗರದಲ್ಲಿ ಸರಗಳ್ಳತನ, ಮನೆ ಕಳ್ಳತನ ಇದಕ್ಕು ಕಡಿವಾಣ ಹಾಕಬೇಕು. ಗಾಣಗಾಪೂರÀಕ್ಕೆ ಬರುವ ಭಕ್ತಾದಿಗಳಿಗೆ ರಸ್ತೆ ಮಾರ್ಗದಲ್ಲಿ ಹಣ, ಚಿನ್ನ ದರೋಡೆ ಮಾಡಲಾಗುತ್ತಿದೆ ಎಂಬ ದೂರು ಬಂದಿವೆ, ಈ ಬಗ್ಗೆಯೂ ಪೊಲೀಸ್ ಇಲಾಖೆ ಗಮನಹರಿಸಬೇಕು ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ ಕುಮಾರ್ ಮತ್ತು ಎಸ್.ಪಿ. ಇಶಾ ಪಂತ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.

ಕಲಬುರಗಿ ಜಿಲ್ಲೆಯಲ್ಲಿ ಯುವತಿಯರು, ಹೆಣ್ಣು ಮಕ್ಕಳ ಕಾಣೆ ಸಂಖ್ಯೆ ಹೆಚ್ಚಾಗುತ್ತಿದೆ. ಅವರೆಲ್ಲ ಎಲ್ಲಿ ಹೋದ್ರು, ಏನಾಯಿತು ಪೊಲೀಸ್ ಇಲಾಖೆ ಬಳಿ ಮಾಹಿತಿ ಇದಿಯೇ? ಪ್ರತಿಯೊಂದು ಪ್ರಕರಣ ಸರಿಯಾಗಿ ಬೇಧಿಸಬೇಕು ಎಂದರು. ಎಸ್.ಪಿ. ಇಶಾ ಪಂತ್ ಮಾತನಾಡಿ ಪೋಕ್ಸೋ ಕಾಯ್ದೆ ಬಗ್ಗೆ ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸಲು ಶಾಲಾ ಮಟ್ಟದಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಸ್ಥಾಪಿಸಿದ್ದು, ಇದೂವರೆಗೆ 34 ಶಾಲೆಗಳ 5,526 ಮಕ್ಕಳಿಗೆ ಅರಿವು ಮೂಡಿಸಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಸಚಿವ ಪ್ರಿಯಾಂಕ್ ಖರ್ಗೆ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇದನ್ನು ಇನ್ನಷ್ಟು ಶಾಲೆ ಮತ್ತು ಸಮುದಾಯಕ್ಕೆ ವಿಸ್ತರಿಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಪೊಲೀಸರು ಚಾರ್ಜ್‍ಶೀಟ್ ಸರಿಯಾಗಿ ಹಾಕದ ಕಾರಣಕ್ಕೆ ಶೇ.94ರಷ್ಟು ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಹೀಗಾಗಿ ಅಪರಾಧಿಗಳಿಗೆ ಕಾನೂನು ಭಯ ಇರುವುದಿಲ್ಲ. ಸರಿಯಾಗಿ ಚಾರ್ಜ್‍ಶೀಟ್ ಹಾಕಿ ಅಪರಾಧಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಲಿಸರದ್ದಾಗಿದೆ ಎಂದರು.
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತು ಮುಂದುವರೆಸಿ, ಬಹುತೇಕ ಠಾಣೆಗಳಲ್ಲಿ ನಾಗರಿಕ ವಿವಾದ (ಸಿವಿಲ್ ಡಿಸ್ಪೂಟ್) ನಲ್ಲಿ ಅನಗತ್ಯ ಪೊಲೀಸ್ ಠಾಣೆಗಳು ಹಸ್ತಕ್ಷೇಪ ಮಾಡುತ್ತಿವೆ ಎಂದು ಸಾರ್ವಜನಿಕರ ದೂರಾಗಿದೆ. ಭೂಗಳ್ಳರ, ಬಲಾಢ್ಯರ ಪರವಾಗಿ ನಿಂತು ಸಿವಿಲ್ ಡಿಸ್ಪೂಟ್ ಬಗೆಹರಿಸುವುದು ಪೊಲೀಸರ ಕೆಲಸವಲ್ಲ. ಇದಕ್ಕೆಲ್ಲ ಇಂದಿನಿಂದಲೆ ಕಡಿವಾಣ ಬೀಳಬೇಕು ಎಂದರು.
ಕಲಬುರಗಿ ನಗರದಲ್ಲಿ ಸುಗಮ ಸಂಚಾರ ಮತ್ತು ಸಂಚಾರ ದಟ್ಟಣೆ ನಿವಾರಣೆಗೆ ಬ್ಲೂ ಪ್ರಿಂಟ್ ಸಿದ್ಧಪಡಿಸಬೇಕು. ಜಿಲ್ಲಾ ಮತ್ತು ನಗರ ಪೊಲೀಸ್ ವ್ಯಾಪ್ತಿಯಲಿಲ ಮೂಲಸೌಕರ್ಯ ಬಲವರ್ಧನೆ ಕುರಿತು ಕ್ರಿಯಾ ಯೋಜನೆ ಸಲ್ಲಿಸಿದಲ್ಲಿ ಸರ್ಕಾರದಿಂದ ಅನುಮೋದನೆ ದೊರಕಿಸಲಾಗುವುದು. ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಮುಖ ಮಾರುಕಟ್ಟೆ, ಬ್ಲ್ಯಾಕ್ ಸ್ಪಾಟ್, ಅಪಘಾತ ವಲಯ ಇವುಗಳನ್ನು ಗುರುತಿಸಿ ಅಲ್ಲಿ ಸಿ.ಸಿ.ಟಿ.ವಿ. ಅಳವಡಿಸಬೇಕು. ರಸ್ತೆ ಸಂಚಾರಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಮೊದಲು ಅರಿವು ಮೂಡಿಸಬೇಕು. ದಂಡ ಹಾಕುವುದಷ್ಟೆ ಟ್ರಾಫಿಕ್ ಪೊಲೀಸರ ಕೆಲಸವಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ರೀಕ್ರಿಯೇಷನ್ ಕ್ಲಬ್‍ನಲ್ಲಿ ಜೂಜಾಟ ಕಂಡಲ್ಲಿ ಲೈಸೆನ್ಸ್ ರದ್ದುಗೊಳಿಸಿ: ಕಲಬುರಗಿ ನಗರದಲ್ಲಿ ರಿಕ್ರೀಯೇಷನ್ ಕ್ಲಬ್‍ನಲ್ಲಿ ಅಕ್ರಮ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಕೂಡಲೆ ಇದಕ್ಕೆ ಪ್ರತ್ಯೇಕ ತಂಡ ರಚಿಸಿ ಅವುಗಳ ಮೇಲೆ ದಾಳಿ ಮಾಡಬೇಕು. ಜೂಜಾಟ ಅಲ್ಲಿ ನಡೆಯುವುದು ಖಾತ್ರಿಯಾದರೆ ಮುಲಾಜಿಲ್ಲದೆ ಪಿ.ಎಸ್.ಐ. ಅವರುಗಳನ್ನು ಅಮಾನತ್ತು ಮಾಡಬೇಕು. ಏಕೆಂದರೆ ಪೊಲೀಸರ ಶ್ರೀರಕ್ಷೆ ಇಲ್ಲದೆ ಈ ಕೆಲಸ ನಡೆಯಲು ಸಾಧ್ಯವಿಲ್ಲ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ ಕುಮಾರ ಅವರಿಗೆ ಸಚಿವ ಡಾ.ಶರಣಪ್ರಕಶ ಪಾಟೀಲ ಅವರು ಸೂಚನೆ ನೀಡಿದರು.
ಠಾಣೆಯಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ: ಠಾಣೆಗಳಲ್ಲಿ ಸಾರ್ವಜನಿಕರೊಂದಿಗೆ ಪೊಲೀಸರು ಯಾವ ರೀತಿಯಲ್ಲಿ ವರ್ತಿಸುತ್ತಾರೆ ಎಂಬುದನ್ನು ಸಾರ್ವಜನಿಕರಿಂದ ಮುಕ್ತವಾಗಿ ತಿಳಿಯಲು ರಾಜ್ಯದಲ್ಲಿಯೇ ಪ್ರಾಯೋಗಿಕವಾಗಿ ಕಲಬುರಗಿ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಕ್ಯೂರ್ ಕೋಡ್ ಪೋಸ್ಟರ್‍ಗಳನ್ನು ಅಳವಡಿಸಲಾಗುತ್ತದೆ. ಠಾಣೆಗೆ ಬರುವ ನಾಗರಿಕರು ಅಲ್ಲಿನ ಮೂಲಸೌಕರ್ಯ ವ್ಯವಸ್ಥೆ ಮತ್ತು ಠಾಣಾ ಸಿಬ್ಬಂದಿ ವರ್ತನೆ ಕುರಿತು ಮೋಬೈಲ್‍ನಲ್ಲಿಯೇ ಕ್ಯೂಆರ್ ಕೋಡ್ ಬಳಸಿ ಫೀಡ್‍ಬ್ಯಾಕ್ ನೀಡಲಿದ್ದಾರೆ. ಇದನ್ನು ಎಸ್.ಪಿ. ಮತ್ತು ನಗರ ಪೊಲೀಸ್ ಆಯುಕ್ತರು 15 ದಿನಕೊಮ್ಮೆ ಮತ್ತು ಖುದ್ದಾಗಿ ನಾನು ಮಾಸಿಕವಾಗಿ ಇದನ್ನು ಪರಿಶೀಲಿಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸೋಷಿಯಾ ಮೀಡಿಯಾ ಮೇಲೆ ನಿಗಾಕ್ಕೆ ಪ್ರತ್ಯೇಕ ಸೆಲ್: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಪೋಸ್ಟ್ ಮಾಡುವುದು, ಸತ್ಯವನ್ನು ತಿರುಚುವುದು, ಜಾತಿ ನಿಂದನೆ ಮಾಡುವುದು ಹೆಚ್ಚಾಗಿದೆ. ಸರ್ಕಾರದ ನೀತಿ-ನಿರ್ಧಾರವನ್ನು ಯಾರೇ ಟೀಕಿಸಿದರು ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಸುಳ್ಳು ಸುದ್ದು ಪಸರಿಸಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ, ಸರ್ಕಾರದ ಯೋಜನೆಗಳ ಬಗ್ಗೆ ತಪ್ಪು ಸಂದೇಶ ನೀಡುವ, ಕೊಲೆ ಬೆದರಿಕೆ ಹಾಕುವಂತಹ ಪೋಸ್ಟ್ ಮಾಡಿದಲ್ಲಿ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ರೀತಿಯ ಪೋಸ್ಟ್ ಕಂಡುಬಂದಲ್ಲಿ ತಕ್ಷಣವೇ ಎಫ್.ಐ.ಆರ್. ಹಾಕಿ ಕಾನೂನು ಕ್ರಮ ತೆಗದುಕೊಳ್ಳಬೇಕು. ಇದಕ್ಕೆ ಪ್ರತ್ಯೇಕ ಸೆಲ್ ರಚಿಸಿ ಸಿಬ್ಬಂದಿಗಳನ್ನು ಸಹ ನಿಯೋಜಿಸಬೇಕು ಎಂದು ಐ.ಟಿ-ಬಿ.ಟಿ ಸಚಿವರು ಆಗಿರುವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು.
ನೈತಿಕ ಪೊಲೀಸ್‍ಗಿರಿಗೆ ಅವಕಾಶವಿಲ್ಲ: ಜಿಲ್ಲೆಯಲ್ಲಿ ನೈತಿಕ ಪೋಲಿಸ್‍ಗಿರಿಗೆ ಅವಕಾಶ ನೀಡಬಾರದು. ಯಾವುದೇ ವ್ಯಕ್ತಿ ತಪ್ಪು ಮಾಡಿದಲ್ಲಿ ಕಾನೂನು ರೀತಿಯಲ್ಲಿ ಪೊಲೀಸರು ಕ್ರಮ ತೆಗದುಕೊಳ್ಳಬೇಕೆ ಹೊರತು ಮೂರನೇ ವ್ಯಕ್ತಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಶಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವಾರ್ ಸಿಂಗ್ ಮೀನಾ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಎ.ಸಿ.ಪಿ. ದೀಪನ್ ಎಂ.ಎನ್., ಪ್ರಭಾರಿ ಅಪರ ಜಿಲ್ಲಾಧಿಕಾರಿ ಎಂ.ರಾಚಪ್ಪ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಸುಮಿತ್ರಾ ಎಸ್., ತಾಲೂಕಿನ ತಹಶೀಲ್ದಾರರು, ಪೆÇಲೀಸ್ ಇಲಾಖೆಯ ಡಿ.ಎಸ್ಪಿ., ಸಿ.ಪಿ.ಐ., ಪಿ.ಎಸ್.ಐ., ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಇದ್ದರು.