
ಅಥಣಿ :ಸೆ.9: ಪುರಸಭಾ ಆಡಳಿತಾಧಿಕಾರಿ ಹಾಗೂ ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಅವರು ಇಂದು ಬೆಳ್ಳಂ ಬೆಳಿಗ್ಗೆ ಅಥಣಿ ಪಟ್ಟಣದ ಜೋಡು ಕೆರೆ, ಪಟ್ಟಣದಲ್ಲಿರುವ ಹಳೆ ಪುರಸಭೆ ಕಟ್ಟಡ ಸೇರಿದಂತೆ ಪೌರ ಕಾರ್ಮಿಕರ ಸ್ವಚ್ಛತಾ ಕಾರ್ಯವನ್ನು ಪುರಸಭಾ ಮುಖ್ಯಾಧಿಕಾರಿ ಅಶೋಕ ಗುಡಿಮನಿಯವರೊಂದಿಗೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿ ಸಾರ್ವಜನಿಕರು ಪುರಸಭೆಯ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಅನೇಕ ದಿನಗಳಿಂದ ಪುರಸಭೆಯಿಂದ ಜೋಡು ಕರೆಗಳ ಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿದ ಅವರು ಎರಡೂ ಕೆರೆಗಳ ಸುತ್ತಲೂ ವಾಕ್ ಪಥ ನಿರ್ಮಿಸಲು ಉದ್ದೇಶಿಸಲಾಗಿದ್ದು,
ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿರುವ ಪುರಸಭೆಯ ಹಳೆಯ ಕಟ್ಟಡ ವೀಕ್ಷಿಸಿದ ಉಪ ವಿಭಾಗಾಧಿಕಾರಿಗಳು ಹಳೆ ಪುರಸಭೆ ಕಟ್ಟಡ ಶಥಿಲಗೊಂಡಿದ್ದು ಇದನ್ನು ತಕ್ಷಣ ತೆರವುಗೊಳಿಸಿ ಸುಸಜ್ಜಿತವಾದ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಎಂದು ಪುರಸಭಾ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು ನಡೆಸುತ್ತಿರುವ ಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿದ ಅವರು ಅನೇಕ ವರ್ಷಗಳವರೆಗೆ ಸ್ವಚ್ಛಗೊಳಿಸದ ನಾಲಾ, ಚರಂಡಿಗಳನ್ನು ಪೌರ ಕಾರ್ಮಿಕರು ಕೆಲವೇ ದಿನಗಳಲ್ಲಿಯೇ ಸ್ವಚ್ಛಗೊಳಿಸಿದ್ದು, ಅವರ ಕಾರ್ಯವನ್ನು ಶ್ಲಾಘಿಸಿದ ಅವರು ಪೌರ ಕಾರ್ಮಿಕರ ಸ್ವಚ್ಛತಾ ಕಾರ್ಯಕ್ಕೆ ಪಟ್ಟಣದ ಜನತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪುರಸಭಾ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾತನಾಡಿ, ಪುರಸಭೆಯ ಜನಪರ ಮತ್ತು ಸ್ವಚ್ಛತಾ ಕಾರ್ಯಗಳಿಗೆ ಪಟ್ಟಣದ ಜನತೆ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ ಮತ್ತು ಪೌರ ಕಾರ್ಮಿಕರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಉಪ ವಿಭಾಗಾಧಿಕಾರಿಗಳಿಗೆ ಅಭಿಯಂತರ ಎಮ್.ಎಚ್.ದೊಡಮನಿ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಸಾಥ ನೀಡಿದರು.