ಸಾರ್ವಜನಿಕರು ತಪ್ಪದೇ ವ್ಯಾಕ್ಸಿನ್ ಹಾಕಿಸಿಕೊಳ್ಳಿ: ಮನವಿ

ತಿ.ನರಸೀಪುರ.ಮೇ.21-ಕೊರೊನಾ ಎರಡನೇ ಅಲೆ ತಾಲೂಕಿನಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗೃತರಾಗಿರುವ ಜೊತೆಗೆ ತಪ್ಪದೇ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್ ಮನವಿ ಮಾಡಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ತಮ್ಮ ಕಚೇರಿಯಲ್ಲಿ ಪತ್ರಿಕರ್ತರಿಗೆ ತಾಲೂಕಿನ ಕೊರೊನಾ ವಿವರದ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು. ಕೊರೊನಾ ಎರಡನೇ ಅಲೆಯಲ್ಲಿ ಏಪ್ರಿಲ್ ನಿಂದ ಈತನಕ ತಾಲೂಕಿನಲ್ಲಿ 3000 ಪಾಸಿಟಿವ್ ಕೇಸ್ ಗಳು ದಾಖಲಾಗಿದ್ದು,ಆ ಪೈಕಿ 2277 ಮಂದಿ ಸೋಂಕಿತರು ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ತಾಲೂಕಿನಲ್ಲೀಗ 723 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ ಎಂದರು.ಸೋಂಕಿನಿಂದ ಈವರೆಗೆ 29 ಮಂದಿ ಮೃತ ಪಟ್ಟಿದ್ದು,ಮೃತ ಪಟ್ಟವರಲ್ಲಿ ಯಾರೊಬ್ಬರೂ ಎರಡು ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ.ಕೇವಲ 6 ಮಂದಿ ಮಾತ್ರ ಮೊದಲ ಡೋಸ್ ಹಾಕಿಸಿಕೊಂಡಿದ್ದು ಇದರಿಂದಾಗಿಯೇ ಸಾವು ಸಂಭವಿಸಿರುವ ಸಾಧ್ಯತೆ ಇದೆ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುತ್ತಿರುವ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು.
ಕೋವ್ಯಾಕ್ಸಿನ್ ಹಾಗು ಕೋವಿಶೀಲ್ಡ್ ಎರಡೂ ವ್ಯಾಕ್ಸಿನ್ ಗಳನ್ನು ನೀಡಲಾಗುತ್ತಿದ್ದು ಕೋವ್ಯಾಕ್ಸಿನ್ ಹಾಕಿಸಿಕೊಳ್ಳುವವರು ಮೊದಲ ಡೋಸ್ ಪಡೆದ ಎರಡನೇ ಡೋಸನ್ನು 4 ರಿಂದ 6 ವಾರಗಳ ಅಂತರ ದೊಳಗೆ ಹಾಗು ಕೋವಿಶೀಲ್ಡ್ ಪಡೆದವರು 12 ರಿಂದ 16 ವಾರಗಳ ಅವಧಿಯಲ್ಲಿ ಎರಡನೇ ಡೋಸ್ ಪಡೆಯಬೇಕೆಂದು ತಿಳಿಸಿದರು.
ಕೊರೊನಾ ರೋಗ ಲಕ್ಷಣಗಳಾದ ಶೀತ,ಕೆಮ್ಮು,ಜ್ವರ ಕಂಡು ಬಂದಲ್ಲಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಪ್ರಾರಂಭಿಕ ಹಂತದ ಮಾತ್ರೆಗಳಾದ ಡಾಕ್ಸಿ ಸೈಕ್ಲಿನ್,ವಿಟಮಿನ್ ಸಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು.ನಂತರ ಅವಶ್ಯಕತೆ ಇದ್ದಲ್ಲಿ ವೈದ್ಯರ ಸಲಹೆ ಮೇರೆಗೆ ಆರ್ ಟಿಸಿಪಿಸಿಆರ್ ಮಾಡಿಸಬೇಕಾಗುತ್ತದೆ.ಅದಕ್ಕೂ ಮುಂಚೆ ಜೀವ ಅಪಾಯವಾಗುವುದನ್ನು ತಪ್ಪಿಸಲು ಮಾತ್ರೆಗಳ ಅವಶ್ಯಕವಾಗಿದೆ ಎಂದರು.
ಸ್ಟೀಮಿಂಗ್ ಬಹು ಮುಖ್ಯ
40 ವರ್ಷದ ಮೇಲ್ಪಟ್ಟವರು ಮನೆಯಿಂದ ಹೊರ ಹೋಗಿ ಬಂದ ವೇಳೆ ಬಿಸಿ ನೀರಿನ ಹಬೆ ತೆಗೆದುಕೊಳ್ಳಬೇಕು.ಇದನ್ನು ತೆಗೆದುಕೊಳ್ಳುವುದರಿಂದ ಸೋಂಕು ತಗುಲುವ ಸಾಧ್ಯತೆ ಜೊತೆಗೆ ಜೀವ ಹಾನಿಯೂ ಸಹ ಕಡಿಮೆ.ಜನ ಸಮೂಹ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು,ಅಪರಿಚಿತರೊಂದಿಗೆ ಹತ್ತು ನಿಮಿಷಕ್ಕಿಂತ ಹೆಚ್ಚು ಮಾತನಾಡುವುದು ಬೇಡ.ಆರೋಗ್ಯ ಇಲಾಖೆಯ ಮಾರ್ಗ ಸೂಚಿ ಪಾಲಿಸಿದಲ್ಲಿ ಸೋಂಕು ತಡೆಗಟ್ಟಬಹುದು.ಕೊರೊನಾ ಎರಡನೇ ಅಲೆ ಹೆಚ್ಚಿರುವುದರಿಂದ ಸೋಂಕಿತರು ಭಯದಿಂದ ಆಸ್ಪತ್ರೆಗೆ ದಾಖಲಾಗಲು ಬಯಸುತ್ತಿದ್ದಾರೆ.ಆದರೆ ಸೋಂಕಿತರು ಮನೆಯಲ್ಲೇ ಐಸೋಲೇಷನ್ ಆಗುವುದು ಒಳ್ಳೆಯದು.ಮನೆಯಲ್ಲಿ ಸೌಲಭ್ಯಗಳಿಲ್ಲದಿದ್ದಲ್ಲಿ ಮಾತ್ರವೇ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಬಹುದಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಬ್ಲಾಕ್ ಫಂಗಸ್:ಖಚಿತವಲ್ಲ
ತಾಲೂಕಿನಲ್ಲಿ ಬ್ಲಾಕ್ ಫಂಗಸ್ ಪ್ರಕರಣ ದಾಖಲಾಗಿರುವುದು ಕಂಡು ಬಂದಿಲ್ಲವಾದರೂ ತಾಲೂಕಿನ ತಲಕಾಡು ಮೂಲದ ವ್ಯಕ್ತಿ ಯೊಬ್ಬರು ಕಳೆದ 20 ದಿನಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದು,ಅವರನ್ನು ತಪಾಸಣೆಗೊಳಪಡಿಸಿದಾಗ ಅವರಿಗೆ ಬ್ಲಾಕ್ ಫಂಗಸ್ ಇರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.ಆದರೆ ಖಚಿತಪಟ್ಟಿಲ್ಲ ಎಂದರು.