ಸಾರ್ವಜನಿಕರು ಡೇಂಗ್ಯೂ ನಿಯಂತ್ರಿಸಲು ಜಾಗೃತಿ ವಹಿಸಬೇಕು:ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ. ಅ.15: ಇತ್ತಿಚೇಗೆ ಬೀದರ ಜಿಲ್ಲೆಯಲ್ಲಿ ಡೇಂಗ್ಯೂ ಪ್ರಕರಣಗಳೂ ಹೆಚ್ಚುತ್ತಿರುವದರಿಂದ ಜಿಲ್ಲೆಯ ಸಾರ್ವಜನಿಕರು ಡೇಂಗ್ಯೂ ನಿಯಂತ್ರಿಸಲು ಮುಂಜಾಗೃತಿ ವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಶುಕ್ರವಾರ ಬೀದರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಡೇಂಗ್ಯೂ ನಿಯಂತ್ರಣ ಕುರಿತು ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡೇಂಗ್ಯೂ ಕಾಯಿಲೆಯು ಈಡೀಸ್ ಜಾತಿಯ ಹೆಣ್ಣು ಸೊಳ್ಳೆ ಕಚ್ಚುವದರಿಂದ ತಗಲುತ್ತದೆ. ಈ ಸೊಳ್ಳೆಗಳು ಹೆಚ್ಚಿನ ದಿನದಿಂದ ಸಂಗ್ರಹಿಸಿಡುವ ನೀರಿನಲ್ಲಿ ತನ್ನ ಸಂತಾನ ಉತ್ಪತಿ ಅಭಿವೃದ್ದಿಪಡಿಸುತ್ತವೆ ಆದ್ದರಿಂದ ಸಾರ್ವಜನಿಕರು ಡ್ರಮ್, ಬ್ಯಾರಲ್, ನೀರಿನ ತೊಟ್ಟಿಗಳು, ಸೇರಿದಂತೆ ಇತರೆ ನೀರಿನ ಸಂಗ್ರಹಕಗಳಲ್ಲಿ ಹೆಚ್ಚಿನ ದಿನದವರೆಗೆ ನೀರು ಇರದಂತೆ ನೋಡಿಕೊಳ್ಳಬೇಕು, ಇವುಗಳನ್ನು ಎರಡು-ಮೂರು ದಿನಕೊಮ್ಮೆ ಸ್ವಚ್ಚಗೊಳಿಸಬೇಕು ಎಂದರು.
ಜಿಲ್ಲೆಯಲ್ಲಿರುವ ಚರಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು ಹಾಗೂ ಸ್ವಚ್ಚತೆ ಕಾಪಾಡಬೇಕು, ಜಿಲ್ಲೆಯ ಸಾರ್ವಜನಿಕರಲ್ಲಿ ಡೇಂಗ್ಯೂ ಬಗ್ಗೆ ಮುಂಜಾಗೃತ ಕ್ರಮ ವಹಿಸಲು ಜಾಗೃತಿ ಮೂಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ ಮಾತನಾಡಿ, ಔರಾದ ತಾಲ್ಲೂಕಿನಲ್ಲಿ ಹೆಚ್ಚಿನ ಡೇಂಗ್ಯೂ ಪ್ರಕಣಗಳು ವರದಿಯಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಡೇಂಗ್ಯೂ ನಿಯಂತ್ರಿಸಲು ಹೆಚ್ಚು ಒತ್ತುಕೊಟ್ಟು ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಬೀದರ ಸಹಾಯಕ ಆಯುಕ್ತ ಲವೀಶ್ ಒರ್ಡಿಯಾ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ ನಿರಗುಡೆ, ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.