ಸಾರ್ವಜನಿಕರು ಕುಡಿಯುವ ನೀರನ್ನು ಕಾಯಿಸಿ ಕುಡಿಯಲು ಮನವಿ

ಕಲಬುರಗಿ,ಜು.20:ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಜಲ ಮೂಲಗಳಾದ ಭೀಮಾ ಮತ್ತು ಬೆಣ್ಣೆತೋರಾ ನದಿಯ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ನದಿಗೆ ಹೊಸ ನೀರು ಬಂದಿರುವ ಪ್ರಯುಕ್ತ ನೀರನ್ನು ಶುದ್ಧೀಕರಿಸಿ ಸೂಪರ್ ಕ್ಲೋರಿನೇಶನ್ ಮಾಡಿ ನೀರು ಸರಬರಾಜು ಮಾಡಲಾಗುತ್ತಿದ್ದು, ಕಲಬುರಗಿ ನಗರದ ಸಾರ್ವಜನಿಕರು ಕುಡಿಯುವ ನೀರನ್ನು ಕಾಯಿಸಿ, ಆರಿಸಿ ಮತ್ತು ಸೊಸಿ ಕುಡಿಯಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್‍ಎಂಪಿ, ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ನಗರದ ಸಾರ್ವಜನಿಕರು ತಮ್ಮ ಮನೆಗಳಿಗೆ ತೆಗೆದುಕೊಂಡು ನಳದ ಜೋಡಣೆಗೆ ತೊಟ್ಟಿಯನ್ನು ಕಡ್ಡಾಯವಾಗಿ ಕೂಡಿಸಿಕೊಳ್ಳವುದರ ಜೊತೆಗೆ ನಳದ ತಗ್ಗುಗಳನ್ನು ಮುಚ್ಚಬೇಕು. ಏಕೆಂದರೆ ತಗ್ಗುಗಳಲ್ಲಿ ಕಲುಷಿತ ನೀರು ಸಂಗ್ರಹಣೆಯಾಗಿ ಅದೇ ಮತ್ತೆ ನಳದ ತೊಟ್ಟಿಯ ಮುಖಾಂತರ ಸಾರ್ವಜನಿಕರಿಗೆ ತಲುಪಲಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಂಭವ ಇರುತ್ತದೆ.
ಆದ್ದರಿಂದ ಸಾರ್ವಜನಿಕರು ನೀರು ಪೋಲಾಗದಂತೆ ನೋಡಿಕೊಳ್ಳುವುದರ ಮೂಲಕ ಕೆಯುಡಬ್ಲ್ಯೂಎಸ್‍ಎಂಪಿ-ಕೆಯುಐಡಿಎಫ್‍ಸಿ ಹಾಗೂ ಮೆ. ಎಲ್ ಆ್ಯಂಡ್ ಟಿ ಲಿಮಿಟೆಡ್‍ದವರೊಂದಿಗೆ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.