ಸಾರ್ವಜನಿಕರು ಒಟ್ಟಾಗಿ ಸೇರುವುದು ನಿಷೇಧ: ಪ್ರೀತಿ ಗೆಹ್ಲೋಟ್

ಬಳ್ಳಾರಿ,ಮಾ.30: ನಗರದಲ್ಲಿ ಕೋವಿಡ್-19ರ 2ನೇ ಅಲೆ ದಿನದಿನಕ್ಕೆ ಹೆಚ್ಚಾಗಿ ಹರಡುತ್ತಿರುವ ಪ್ರಕರಣಗಳು ಕಂಡುಬರುತ್ತಿದೆ. ಸಾರ್ವಜನಿಕರು ಒಟ್ಟಾಗಿ ಸೇರುವುದರಿಂದ ಒಬ್ಬರಿಂದ ಒಬ್ಬರಿಗೆ ಕೋವಿಡ್-19ರ ವೈರಾಣು ಹರಡುವ ಸಂಭವವು ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಕೋವಿಡ್ ನಿಯಂತ್ರಣದ ಸಲುವಾಗಿ ನಗರದಲ್ಲಿ ಮುಂಬರುವ ಯುಗಾದಿ, ಷಬ್-ಎ ಬರಾತ್, ಗುಡ್ ಪ್ರೈಡೇ, ಜಾತ್ರಾ ಉತ್ಸವಗಳು, ಸಮಾಜ ಸುಧಾರಕರ ಹಾಗೂ ಗಣ್ಯ ವ್ಯಕ್ತಿಗಳ ಜಯಂತಿಯನ್ನು ಹಾಗೂ ಬಹಿರಂಗ ಸಭೆಗಳು ಮತ್ತು ಇತ್ಯಾದಿ ಕಾರ್ಯಕ್ರಮಗಳಲ್ಲಿ ಗುಂಪಾಗಿ ಸೇರುವುದನ್ನು ನಿಷೇಧಿಸಿದೆ ಎಂದು ಮಹಾನಗರಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕನ್ನು ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು, ಅನಾವಶ್ಯಕವಾಗಿ ಅಲೆದಾಡುವುದನ್ನು ನಿಲ್ಲಿಸುವುದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಈ ಮೇಲೆ ಸೂಚಿಸಿರುವ ನಿಯಮಗಳನ್ನು ಪಾಲಿಸದಿದ್ದರೆ ಪ್ರತಿಯೊಬ್ಬರಿಗೆ 250 ರೂ.ಗಳ ದಂಡ ವಸೂಲಿ ಮಾಡಲಾಗುವುದು ಅಲ್ಲದೆ ಕಾನೂನಿನ ರೀತ್ಯಾ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.