ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡುವಂತಿಲ್ಲ: ಡಿಸಿ ಕವಿತಾ ಎಸ್.ಮನ್ನಿಕೇರಿ ಕಫ್ರ್ಯೂ ಅನುಷ್ಠಾನಕ್ಕೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ

ಚಿತ್ರದುರ್ಗ, ಏಪ್ರಿಲ್28:
ಕೋವಿಡ್-19 ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಈಗಾಗಲೇ ಏಪ್ರಿಲ್ 27ರ ರಾತ್ರಿ 9ರಿಂದ ಮೇ 12ರ ವರೆಗೆ ಬೆಳಿಗ್ಗೆ 6 ಗಂಟೆವರೆಗೆ ಕಫ್ರ್ಯೂ ಜಾರಿಗೊಳಿಸಿದೆ. ಈ ವೇಳೆಯಲ್ಲಿ ಅನಾವಶ್ಯಕವಾಗಿ ಓಡಾಡುವವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕೋವಿಡ್-19ರ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೆಳಿಗ್ಗೆ 6 ರಿಂದ 10 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಮೆಡಿಕಲ್ ಸ್ಟೋರ್ ಹಾಗೂ ವೈದ್ಯಕೀಯ ಸೇವೆ ಹೊರತು ಪಡಿಸಿ ಕಫ್ರ್ಯೂ ಅವಧಿಯಲ್ಲಿ ಯಾವುದೇ ಅಂಗಡಿಗಳು ತೆರೆದಿರುವುದಿಲ್ಲ.  ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದರು.
ಬೇರೆ ಜಿಲ್ಲೆಗಳಿಗೆ ಪ್ರಯಾಣ ಬೆಳೆಸುವವರಿಗೆ ಯಾವುದೇ ರೀತಿಯ ಪಾಸ್‍ಗಳು ವಿತರಣೆ ಮಾಡುವುದಿಲ್ಲ. ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ಪ್ರಯಾಣ ಬೆಳೆಸಬಹುದಾಗಿದೆ. ತುರ್ತು ಸಮಯದಲ್ಲಿ ವಾಹನಗಳ ಅವಶ್ಯಕತೆ ಇದ್ದರೆ ಆರ್‍ಟಿಒಗೆ ಸಂಪರ್ಕಿಸಬಹುದು. ಇದರ ಜೊತೆಗೆ 108 ವಾಹನದ ಸೌಲಭ್ಯವೂ ಲಭ್ಯವಿದೆ ಎಂದರು.
ಹೋಟೆಲ್‍ಗಳಲ್ಲಿ ಪಾರ್ಸೆಲ್ ಮಾತ್ರ ಅವಕಾಶವಿದೆ. ಅಗತ್ಯ ಸೇವೆ ಒದಗಿಸುವವರು ತಮ್ಮ ಗ್ರಾಹಕರಿಗೆ ಮೊಬೈಲ್ ನಂಬರ್ ನೀಡಿ ಹೋಂ ಡೆಲಿವೆರಿಗೆ ಅವಕಾಶ ಕಲ್ಪಿಸಲಾಗಿದ್ದು, ಅಗತ್ಯ ವಸ್ತುಗಳ ಸೇವೆಯನ್ನು ಮಾತ್ರ ಹೋಂ ಡೆಲಿವೆರಿ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಿದರು.
ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್‍ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಬ್ಬರು ಮರಣ ಹೊಂದಿದ್ದಾರೆ. ವೈದ್ಯಕೀಯ ಸಲಹೆ ವಿರೋಧಿಸಿ ಬೇರೆ ಜಿಲ್ಲೆಗೆ ಪ್ರಯಾಣ ಮಾಡಿದ ಸಂದರ್ಭದಲ್ಲಿ ಮಾರ್ಗ ಮಧ್ಯೆದಲ್ಲಿ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವುದರಿಂz ಇಬ್ಬರು ಕೋವಿಡ್ ಸೋಂಕಿತರು ಮರಣ ಹೊಂದಿದ್ದಾರೆ. ಕೋವಿಡ್ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯ ಡೆತ್ ಆಡಿಟ್ ಸಮಿತಿಯಿಂದ ಡೆತ್ ಆಡಿಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಆಗಮಿಸುತ್ತಿದ್ದಾರೆ. ಇಂತಹವರು ಸ್ವಯಂ ಪ್ರೇರಣೆಯಿಂದ 10 ದಿನಗಳ ಕಾಲ ಕ್ವಾರಂಟೈನ್ ಆಗಬೇಕು. ರೋಗ ಲಕ್ಷಣಗಳು ಕಂಡು ಬಂದರೆ ಕೋವಿಡ್ ಪರೀಕ್ಷೆ ಮಾಡಿಸಬೇಕು. ಈ ಕುರಿತು ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಮಾರ್ಗದರ್ಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೋವಿಡ್-19 ಸಹಾಯವಾಣಿ ಪ್ರಾರಂಭ: ಕೋವಿಡ್‍ಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಜಿಲ್ಲೆಯಲ್ಲಿ ಕೋವಿಡ್-19 ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. 7760022142, 7760057142 ಈ ನಂಬರಿಗೆ ಕರೆ ಮಾಡಿ ಕೋವಿಡ್‍ಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಬಹುದಾಗಿದೆ.
ಪ್ಲೈಯಿಂಗ್ ಸ್ಕ್ವಾಡ್ ನೇಮಕ: ಬೆಳಿಗ್ಗೆ 6ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿ ಅಗತ್ಯ ವಸ್ತುಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ  ಮಾರಾಟ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ಲೈಯಿಂಗ್ ಸ್ಕ್ವಾಡ್ ನೇಮಕ ಮಾಡಲಾಗಿದೆ. ರೆಮ್‍ಡಿಸಿವರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಇದಕ್ಕೂ ಸಹ ಸ್ಕ್ವಾಡ್ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಮಾತನಾಡಿ, ಕೋವಿಡ್-19 ಮೊದಲನೇ ಅಲೆಗಿಂತ ಎರಡನೇ ಅಲೆಯಲ್ಲಿ ಸೋಂಕು ಹರಡುವಿಕೆ ಪ್ರಮಾಣ ತೀವ್ರವಾಗಿದೆ. ಮೊದಲನೇ ಅಲೆಯ ಸಂದರ್ಭದಲ್ಲಿ ಜ್ವರ, ಶೀತ, ಕೆಮ್ಮು ಸೋಂಕಿತ ಲಕ್ಷಣಗಳು ಕಂಡುಬರುತ್ತಿದ್ದವು. ಎರಡನೇ ಅಲೆಯಲ್ಲಿ ಬೇಧಿ, ಸುಸ್ತು, ಕಣ್ಣು ಕೆಂಪಾದರೂ ಸೋಂಕು ದೃಢಪಟ್ಟಿರುವ ಪ್ರಕರಣಗಳು ಇವೆ. ಆರ್‍ಟಿಪಿಸಿಆರ್, ರ್ಯಾಟ್ ನೆಗೆಟಿವ್ ಇದ್ದರೂ ಸಿಟಿ ಸ್ಕ್ಯಾನ್ ಪರೀಕ್ಷೆ ಮಾಡಿದಾಗ ಸೋಂಕು ಖಚಿತವಾಗಿರುವ ಪ್ರಕರಣಗಳು ಕಂಡುಬಂದಿವೆ ಎಂದರು.
ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯವಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ದಿನ 50 ರಿಂದ 60 ಸಿಟಿ ಸ್ಕ್ಯಾನ್ ಮಾಡಲಾಗುತ್ತಿದೆ ಎಂದರು.
ಜಿಲ್ಲೆಗೆ ಮಂಗಳವಾರ 4000 ಕೋವಿಡ್ ಲಸಿಕೆ ಬಂದಿದೆ. ಈಗಾಗಲೇ 190 ಲಸಿಕಾ ಕೇಂದ್ರಗಳಿಗೆ ಲಸಿಕೆಯನ್ನು ಸರಬರಾಜು ಮಾಡಲಾಗಿದೆ. ಮೇ 01 ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಕೋವಿಡ್ ಲಸಿಕೆ ಸರಬರಾಜಿಗೆ ಇಂಡೆಟ್ ಸಲ್ಲಿಸಲಾಗಿದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಮೊದಲು ಆರೋಗ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೆಪಿಎಂ ಕಾಯ್ದೆ ಅನ್ವಯ ಅನುಮತಿ ನೀಡಲಾಗುತ್ತದೆ. ಅನುಮತಿ ಇಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ನರ್ಸಿಂಗ್ ಹೋಂ, ಕ್ಲಿನಿಕ್, ಆಸ್ಪತ್ರೆಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಬಸವೇಶ್ವರ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು, ಕೃಷ್ಣ ನರ್ಸಿಂಗ್ ಹೋಂ, ಅಕ್ಷಯ ಗ್ಲೋಬಲ್ ಹಾಸ್ಟಿಟಲ್ ಸೇರಿದಂತೆ ಜಿಲ್ಲೆಯ ಐದು ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾತನಾಡಿ, ಮೊಳಕಾಲ್ಮರಿನ ತಾಲ್ಲೂಕಿನ  ಎದ್ದಲಬೊಮ್ಮಯ್ಯನಹಟ್ಟಿ ಹಾಗೂ ತಮ್ಮೇನಹಳ್ಳಿ, ಹಿರಿಯೂರು ತಾಲ್ಲೂಕಿನ ಜೆ.ಜಿ ಹಳ್ಳಿ, ಹೊಸದುರ್ಗ ತಾಲ್ಲೂಕಿನ ತರೀಕೆರೆ ರಸ್ತೆ, ಶ್ರೀರಾಂಪುರ ಬೆಲಗೂರಿನಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ. ಇದರ ಜೊತೆಗೆ ಹೆಚ್ಚಿನ ವಾಹನ ಸಂಚಾರ ಮಾಡುವ ಕಡೆ ಮೊಬೈಲ್ ಚೆಕ್‍ಪೋಸ್ಟ್ ಸ್ಥಾಪಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
 ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹೆಚ್.ಜೆ.ಬಸವರಾಜಪ್ಪ ಇದ್ದರು.