ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗದಂತೆ ನೊಂದಣಿ ಕಾರ್ಯನಿರ್ವಹಿಸಿ 

ಚಿತ್ರದುರ್ಗ.ಜ.೧೩ಜಿಲ್ಲಾ ಕಾನೂನು ಸೇವಾ ಸಮಿತಿ ವತಿಯಿಂದ ನಿಯಮಾನುಸಾರ 2015 ರಿಂದ 21ರ ವರೆಗೆ ಅವಧಿ ಮೀರಿ ನೊಂದಣಿಯಾಗದೆ ಉಳಿದ ಹಳೆಯ 3205 ಜನನ ಹಾಗೂ 1115 ಮರಣ ನೋಂದಣಿಗೆ ಕ್ರಮ ವಹಿಸಲಾಗಿದೆ. ಎಲ್ಲಾ ಪ್ರಕರಣಗಳನ್ನು ನ್ಯಾಯಾಲಯದ ಮೂಲಕ ಬಗೆಹರಿಸಲು ತೀರ್ಮಾನಿಸಲಾಗಿದ್ದು, ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟವರಿಂದ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತಪ್ಪು ಸಂದೇಶ ಹೋಗದಂತೆ ಕಾರ್ಯನಿರ್ವಹಿಸಬೇಕು ಎಂದು ನೋಂದಣಿ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಜರುಗಿದ ಜಿಲ್ಲಾ ಮಟ್ಟದ ನಾಗರೀಕ ನೋಂದಣಿ ಪದ್ದತಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಒಳ್ಳೆಯ ಉದ್ದೇಶದಿಂದ ಅಧಿಕಾರಿಗಳು ಮುತುವರ್ಜಿ ವಹಿಸಿ ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿಯಾಗದೆ ಉಳಿದ ಪ್ರಕರಣಗಳನ್ನು ನ್ಯಾಯಾಲಯದ ಮೂಲಕ ಬಗೆಹರಿಸುತ್ತಿದ್ದಾರೆ. ನೋಂದಣಿ ಘಟಕವಾರು ಬಾಕಿ ಉಳಿದರುವ ಜನನ ನೋಂದಣಿ ಸಂಖ್ಯೆಯನ್ನು ಈಗಾಗಲೇ ತಿಳಿಸಲಾಗಿದೆ. ನೋಂದಣಿ ಅಧಿಕಾರಿಗಳು ಈ ಮಾಹಿತಿ ಆಧರಿಸಿ, ನ್ಯಾಯಾಲಯ ಅರ್ಜಿ, ಪೋಷಕರ ಆಧಾರ್ ಕಾರ್ಡ್ ಹಾಗೂ ಫಾರಂ-1ನ್ನು ಸರಿಯಾದ ಕ್ರಮದಲ್ಲಿ ಭರ್ತಿ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಲೋಕ ಅದಾಲತ್ ಮೂಲಕ ಈ ಪ್ರಕರಣಗಳನ್ನು ತ್ವರಿತವಾಗಿ ಬಗೆಹರಿಸುವ ಕುರಿತು ಜಿಲ್ಲಾ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ನ್ಯಾಯಾಧೀಶ ಬಿ.ಕೆ.ಗಿರೀಶ ಅವರು ಭರವಸೆ ನೀಡಿದ್ದಾರೆ ಎಂದರು.