ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಬೇಡಿ

   

ಧಾರವಾಡ ಮೇ 1 – ಸಚಿವ ಡಾ. ಸುಧಾಕರ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಚಾಳಿಯನ್ನು ಬಿಡಬೇಕು ಎಂದು ಕಾಂಗ್ರೆಸ್ ವಕ್ತಾರ ರಾಬರ್ಟ್ ದದ್ದಾಪುರಿ ಹಾಗೂ ಕಾಂಗ್ರೆಸ್ ಮುಖಂಡ ಆನಂದ್ ಜಾಧವ್ ಜಂಟಿಯಾಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು 18 ವರ್ಷ ಮೇಲ್ಪಟ್ಟ ಯುವಕರಿಂದ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಯನ್ನು ಮೇ ಒಂದನೇ ತಾರೀಖಿನಿಂದ ನೀಡುವುದಾಗಿ ತಿಳಿಸಿದ್ದರು. ಆದರೆ ಈಗ ಲಸಿಕೆಗಳ ಕೊರತೆಯ ಹಿನ್ನಲೆಯಲ್ಲಿ ಲಸಿಕೆ ನೀಡುವ ಸಮಯವನ್ನು ಮುಂದಕ್ಕೆ ಹಾಕುತ್ತಿದ್ದಾರೆ. ಇದು ಯುವಕರನ್ನು ಆತಂಕಕ್ಕೆ ಈಡು ಮಾಡುವ ಕ್ರಮವಾಗಿದೆ ಮೊದಲೇ ಇಲಾಖೆಯಲ್ಲಿ ಲಸಿಕೆಗಳು ಲಭ್ಯ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಉತ್ತಮ. ಆದರೆ ಸಚಿವ ಡಾ. ಸುಧಾಕರ್ ಅವರು ಪೂರ್ವ ಮಾಹಿತಿ ಇಲ್ಲದೆ ಸಾರ್ವಜನಿಕವಾಗಿ ತಪ್ಪು ಮಾಹಿತಿಯನ್ನು ನೀಡಿ ಯುವಕರನ್ನು ಭಯಭೀತರನ್ನಾಗಿ ಮಾಡುವುದು ಸರಿಯಾದ ಕ್ರಮವಲ್ಲ ಇದೇ ಚಾಳಿಯನ್ನು ಸಚಿವರು ಮುಂದುವರೆಸಿದರೆ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಆಗ್ರಹಿಸಿದ್ದಾರೆ.