ಸಾರ್ವಜನಿಕರಿಗೆ ಆಸ್ತಿ ತೆರಿಗೆ ಭಾರ ಕಡಿಮೆ ಮಾಡಲು ಒತ್ತಾಯ

ಮಸ್ಕಿ,ಜ.೧೪- ಪಟ್ಟಣದ ಪುರಸಭೆ ಕಚೇರಿಯಲ್ಲಿ ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ ಬಸನಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ಅಂದಾಜು ಪತ್ರಿಕೆಗೆ ಒಪ್ಪಿಗೆ ಪಡೆಯುವ ಕುರಿತು ಸಾರ್ವಜನಿಕ ಸಭೆ ಏರ್ಪಡಿಸಲಗಿತ್ತು.
ಪಟ್ಟಣದಲ್ಲಿರುವ ಮನೆ, ಖಾಲಿ ನಿವೇಶನ ಮತ್ತು ವಾಣಿಜ್ಯ ಮಳಿಗೆಗಳಿಗೆ ಅಧಿಕ ತೆರಿಗೆ ವಿಧಿಸುತ್ತಿರುವದನ್ನು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕರ ಭಾರ ತಗ್ಗಿಸುವಂತೆ ಒತ್ತಾಯಿಸಿದರು ಸಭೆಯಲ್ಲಿ ಭಾಗವಹಿಸಿದ್ದ ಹನುಮೇಶ ಕುಲಕರ್ಣಿ, ಅಮರಪ್ಪ ಅಂಗಡಿ, ಡಾ.ಬಿ.ಎಚ್.ದಿವಟರ್, ಕರಿಬಸಯ್ಯ ಸ್ವಾಮಿ ತೆರಿಗೆ ಹೆಚ್ಚಳದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಇತರ ಪುರಸಭೆಗಳಲ್ಲಿ ಇಲ್ಲದ ತೆರಿಗೆ ಮಸ್ಕಿ ಪುರಸಭೆಯಲ್ಲಿದೆ ಸರಕಾರ ಒಂದೊಂದು ಪುರಸಭೆಗೆ ಒಂದೊಂದು ತೆರಿಗೆ ವಿಧಿಸುತ್ತದೆಯೇ ಈ ಹಿಂದೆ ನೀವು ಯಾರನ್ನು ಕೇಳಿ ತೆರಿಗೆಯನ್ನು ಫಿಕ್ಸ್ ಮಾಡಿದ್ದೀರಿ ಎಂದು ಮುಖ್ಯಾಧಿಕಾರಿಗೆ ಪ್ರಶ್ನಿಸಿದರು.
ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಮಾತನಾಡಿ ಸರಕಾರದ ಮಾರ್ಗದರ್ಶನದಂತೆ ತೆರಿಗೆ ವಿಧಿಸಲಾಗುತ್ತದೆ ತೆರಿಗೆ ಹೆಚ್ಚಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವದು ಎಂದರು ಪುರಸಭೆ ಮಾಜಿ ಅಧ್ಯಕ್ಷ ಮೌನೇಶ ಮುರಾರಿ ಮಾತನಾಡಿ ಪುರಸಭೆಯಲ್ಲಿ ಸಾರ್ವಜನಿಕರ ಆಸ್ತಿ ಮೇಲಿನ ತೆರಿಗಳನ್ನು ಕಡಿತಗೊಳಿಸುವುದಕ್ಕಾಗಿ ಯಾವುದೇ ರೀತಿಯ ಪ್ರಯತ್ನಗಳು ನಡೆದಿಲ್ಲವೆಂದು ಕೆಲವೊಬ್ಬರು ಸಭೆಯಲ್ಲಿ ಹೇಳುತ್ತಿದ್ದೀರಿ, ಆದರೆ ತೆರಿಗೆ ಕಡಿತಗೊಳಿಸುವ ಸಂಭಂಧ ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಊರಿನ ಹಿರಿಯ ಮುಖಂಡರಾದ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್ ಹಾಗೂ ಇನ್ನಿತರ ಹಿರಿಯ ಮುಖಂಡರ ಜೊತೆ ಎರಡು ಸಲ ಸಭೆ ನಡೆಸಿ ಅವರ ಮಾರ್ಗದರ್ಶನದಲ್ಲಿ ಮೇಲಾಧಿಕಾರಿಳಿಗೆ ಭೇಟಿ ಮಾಡಿ ಮನವಿ ಮಾಡಿದ್ದೇವೆ. ನೀವು ಜನರಲ್ಲಿ ನಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಹೀಗೆ ಹೇಳಬೇಡಿ ಬೇಕಿದ್ದರೆ ಈ ಹಿಂದಿನ ಸಭೆಯ ನಡುವಳಿಕೆಗಳು ಹಾಗೂ ಮುಖಂಡರು ಮಾಡಿರುವ ಸಹಿ ಹಾಗೂ ಪತ್ರಗಳನ್ನು ನೋಡಿ ಎಂದು ಹೇಳಿದರು. ಎರಡು ಬಾರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಆದರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಸ್ಪಷ್ಟ ಪಡಿಸಿದರು. ಪಟ್ಟಣದಲ್ಲಿ ಕಸ ವಿಲೇವಾರಿ ಸಮಸ್ಯೆ, ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆ, ಕಳಪೆ ಸಿಸಿ ರಸ್ತೆ ನಿರ್ಮಾಣ ಕುರಿತು ಸಾರ್ವಜನಿಕರು ದೂರುಗಳ ಸುರಿಮಳೆ ಸುರಿಸಿದರು. ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ತಾಳ್ಮೆಯಿಂದ ಜನರ ಸಮಸ್ಯೆ ಆಲಿಸಿ ಹಂತ ಹಂತವಾಗಿ ಸಮಸ್ಯೆ ಗಳ ಪರಿಹಾರಕ್ಕೆ ಮುಂದಾಗುವೆ ಎಂದರು.
ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಬಸನಗೌಡ ಪಾಟೀಲ್, ಉಪಾಧ್ಯಕ್ಷೆ ಕವಿತಾ ಅಮರೇಶ ಮಾಟೂರು, ದೊಡ್ಡಪ್ಪ ಕಡಬೂರು, ಅಶೋಕ ಠಾಕೂರ, ಪುರಸಭೆ ಸದಸ್ಯರಾದ ಎಂ.ಅಮರೇಶ, ಕಿರಣ ಸಾನಬಾಳ, ನೀಲಕಂಠಪ್ಪ ಭಜಂತ್ರಿ, ರೇಣುಕಾ, ಪುರಸಭೆ ವ್ಯವಸ್ಥಾಪಕ ಸತ್ಯನಾರಯಣ, ಎಂಜಿನಿಯರ್ ಮೀನಾಕ್ಷಿ, ಸಿಬ್ಬಂದಿಗಳಾದ ರಾಘವೇಂದ್ರ,ಜಗದೀಶ, ಶಿವಣ್ಣ ಸೇರಿದಂತೆ ಇನ್ನಿತರರು ಇದ್ದರು.