ಸಾರ್ವಜನಿಕರಿಂದ ಕುಂದುಕೊರತೆಗಳ ಮಹಾಪುರ


ಸಂಜೆವಾಣಿ ವಾರ್ತೆ
ಸಿರುಗುಪ್ಪ: ಎಲ್ಲಾ ಇಲಾಖೆಯ ಅಧಿಕಾರಿಗಳು ಸರ್ಕಾರ ನಿಗಧಿಪಡಿಸಿದ ಅವಧಿಯೊಳಗೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು‌ ಹಾಗೂ ವಿನಾಕಾರಣ ಸಾರ್ವಜನಿಕರು ಸರ್ಕಾರಿ ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕು ಅದ್ದರಿಂದ ಅಧಿಕಾರಿಗಳು ಬದ್ದತೆಯಿಂದ ಕಾರ್ಯನಿರ್ವಹಿಸಬೇಕೆಂದು ಲೋಕಾಯುಕ್ತ ಸಿ.ಪಿ.ಐ. ಸಂಗಮೇಶ್ ತಿಳಿಸಿದರು.
ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದ ಅಹವಾಲುಗಳನ್ನು ಸ್ವೀಕರಿಸಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಸರ್ಕಾರಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡಿದ್ದರೆ ನಮ್ಮ ಇಲಾಖೆಯ ಅವಶ್ಯಕತೆ ಇರುತ್ತಿರಲಿಲ್ಲ, ಆದರೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುವಂತೆ ನಿಗಾವಹಿಸುವುದು ಮತ್ತು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಸುವುದು ನಮ್ಮ ಇಲಾಖೆಯ ಮುಖ್ಯ ಕರ್ತವ್ಯವಾಗಿದೆ.
  ಅನ್ನ ಹಾಕುವ ಕಾಲುವೆಗೆ ಮಣ್ಣು ಹಾಕಬೇಡಿ, ನೀವು ರಿಪೇರಿ ಮಾಡುವ ಮುನ್ನ ನಮ್ಮ ಕಾಲುವೆಗೆ ಸಮರ್ಪಕವಾಗಿ ನೀರು ಬರುತ್ತಿದ್ದವು ಆದರೆ ನೀವು ರಿಪೇರಿ ಮಾಡಿದ ನಂತರ ನಮ್ಮ ಕಾಲುವೆಯಲ್ಲಿ ನೀರೇ ಬರುತ್ತಿಲ್ಲ, ನಿಮ್ಮ ಉದ್ದೇಶವೇನು, ರೈತರ ಜಮೀನುಗಳಿಗೆ ನೀರು ಹರಿಸುವುದಾ ಅಥವಾ ನೀರು ಬರದಂತೆ ಮಾಡುವುದಾ, ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮಾಡಿದ ಕೆಲಸದಿಂದಾಗಿ ನಾವು ಯಾವುದೇ ಬೆಳೆ ಬೆಳೆಯಲು ಬೇಕಾದ ನೀರು ಬರಲು ಸಾಧ್ಯವಿಲ್ಲ, ಆದ್ದರಿಂದ ಮೊದಲಿನಂತೆ ನಮಗೆ ಕಾಲುವೆಯನ್ನು ಮಾಡಿಕೊಡಿ ಎಂದು ಸಿರುಗುಪ್ಪ ನಗರದ ವಿಜಯನಗರ ಕಾಲುವೆ ವ್ಯಾಪ್ತಿಯ ರೈತರು ಲೋಕಾಯುಕ್ತರ ಮುಂದೆ ತಮ್ಮ ಗೋಳನ್ನು ತೋಡಿಕೊಂಡರು.
   ತಾಲೂಕು ಕಛೇರಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಿರುಗುಪ್ಪ ರೈತರು ಲೋಕಾಯುಕ್ತ ಸಿ.ಪಿ.ಐ. ಸಂಗಮೇಶ್ ಅವರಿಗೆ ಸಲ್ಲಿಸಿದ ದೂರಿನಲ್ಲಿ  ನೀರಾವರಿ ಇಲಾಖೆ ಅಧಿಕಾರಿ ಸುರೇಶ್ ಪೂಜಾರಿ ಮತ್ತು ಗುತ್ತಿಗೆದಾರ ಆರ್.ಎನ್.ಶೆಟ್ಟಿ ವಿರುದ್ದ ಕ್ರಮ ತೆಗೆದುಕೊಳ್ಳಬೇಕು, ಮೊದಲಿನಂತೆ ಕಾಲುವೆಯಲ್ಲಿ ನೀರು ಹರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ರೈತರಾದ ಶರ್ಮಸ್, ವಡೇ ಯಂಕೋಬ, ಆರ್.ಯಲ್ಲಯ್ಯ, ಮುದಿಯಪ್ಪ, ಚಂದ್ರ, ವಿಜಯ್, ಹನುಮೇಶ, ಹಾಜಿಸಾಬ್ ಆಗ್ರಹಿಸಿದರು.
ಕಂದಾಯ, ಆಸ್ಪತ್ರೆ, ನಗರಸಭೆ, ನೀರಾವರಿ ಇಲಾಖೆ ಸೇರಿದಂತೆ ಒಟ್ಟು 7 ಅರ್ಜಿಗಳು ಸಾರ್ವಜನಿಕರಿಂದ ಬಂದಿದ್ದು, ಅವುಗಳನ್ನು ಇತ್ಯಾರ್ಥ ಪಡಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮ ತೆಗೆದುಕೊಂಡು ಅದರ ಬಗ್ಗೆ ನಮ್ಮ ಕಛೇರಿಗೆ ಮತ್ತು ದೂರು ನೀಡಿದವರಿಗೆ ಪತ್ರದ ಮುಖಾಂತರ ಮಾಹಿತಿಯನ್ನು ನೀಡಬೇಕೆಂದು ಸೂಚಿಸಿದರು.
  ತಾಲೂಕಿನ ಕರೂರು ರೈತ ಸಂಪರ್ಕ ಕೇಂದ್ರದಲ್ಲಿ 2014-15 ರಿಂದ 2017-18ರ ಸಾಲಿನವರೆಗೆ ಕರೂರು ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎಸ್.ಸುಬಾನ್ ಅವರು ಕೃಷಿ ಹೊಂಡದ ನಿರ್ಮಾಣದಲ್ಲಿ ಅಕ್ರಮ, ಅವ್ಯವಹಾರ ಮಾಡಿದ್ದು, ಮತ್ತು ಸರ್ಕಾರದಿಂದ ಬಂದ ಕೃಷಿ ಹೊಂಡಗಳ ಸಹಾಯಧನವನ್ನು ಕಾನೂನು ಬಾಹಿರವಾಗಿ ರೈತರ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಂಡಿದ್ದು, ಕೃಷಿ ಭಾಗ್ಯ ಯೋಜನೆಯ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುತ್ತಾರೆ.  ಯಾವುದೇ ರೀತಿಯಿಂದ ಕರೂರು ರೈತ ಸಂರ್ಪಕ ಕೇಂದ್ರದ ಅಡಿಯಲ್ಲಿ ಬರುವ ಅನೇಕ ಹಳ್ಳಿಗಳ ರೈತರ ಜಮೀನಿನಲ್ಲಿ ಕೃಷಿ ಹೊಂಡಗಳು ನಿರ್ಮಾಣ ಮಾಡಿರುವುದು ಕೇವಲ ಸರ್ಕಾರಿ ದಾಖಲೆಯಲ್ಲಿ ಮಾತ್ರ ಇರುತ್ತದೆ. ಆದರೆ ವಾಸ್ತವವಾಗಿ ಕೃಷಿ ಹೊಂಡಗಳ ನಿರ್ಮಾಣ ಕಾರ್ಯ ನಡೆದಿರುವುದಿಲ್ಲ, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕರೂರು ಗ್ರಾಮದ ರೈತ ವೈ.ಕೃಷ್ಣಾರೆಡ್ಡಿ ದೂರು ಸಲ್ಲಿಸಿದರು.
ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ, ತಾ.ಪಂ.ಇ.ಒ. ಎಂ.ಬಸಪ್ಪ, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.