ಸಾರ್ಥಕ ಬದುಕು ಶ್ರೇಯಸ್ಸಿಗೆ ಅಡಿಪಾಯ :  ರಂಭಾಪುರಿ ಜಗದ್ಗುರು

ಕಲಘಟಗಿ.ನ.೨೩; ಹುಟ್ಟು ಸಾವು ಯಾರನ್ನೂ ಬಿಟ್ಟಿಲ್ಲ. ಹುಟ್ಟು ಸಾವು ಮನುಷ್ಯನ ಕೈಯಲ್ಲಿ ಇಲ್ಲ. ಆದರೆ ಬದುಕು ಮಾತ್ರ ಮನುಷ್ಯನ ಕೈಯಲ್ಲಿದೆ. ಸಾರ್ಥಕ ಬದುಕು ಶ್ರೇಯಸ್ಸಿಗೆ ಅಡಿಪಾಯ ಎಂಬುದನ್ನು ಯಾರೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.ಅವರು ತಾಲೂಕಿನ ದಾಸ್ತಿಕೊಪ್ಪ ಹನ್ನೆರಡುಮಠದಲ್ಲಿ ಜರುಗಿದ ವೀರತಪಸ್ವಿ ಲಿಂ. ಶ್ರೀ ಮಡಿವಾಳ ಶಿವಾಚಾರ್ಯ ಸ್ವಾಮಿಗಳವರ ಲಿಂಗಾಂಗ ಸಾಮರಸ್ಯದ 32ನೇ ಪುಣ್ಯಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಮನುಷ್ಯ ಎಷ್ಟೇ ವರುಷ ಬದುಕಿ ಬಾಳಿದರೂ ಒಂದಿಲ್ಲ ಒಂದು ದಿನ ಮೃತ್ಯು ಬಿಟ್ಟಿದಲ್ಲ. ಹುಟ್ಟು ಸಾವುಗಳ ಮಧ್ಯದ ಬದುಕು ಸಮೃದ್ಧಗೊಳಿಸಿಕೊಳ್ಳಬೇಕಾದುದು ಅವರವರ ಜವಾಬ್ದಾರಿಯಾಗಿದೆ. ಹುಟ್ಟುವಾಗ ಉಸಿರಿದ್ದರೂ ಹೆಸರು ಇರುವುದಿಲ್ಲ. ಅಗಲಿದಾಗ ಉಸಿರು ಇರುವುದಿಲ್ಲ. ಆದರೆ ಹೆಸರು ಉಳಿಯುವ ರೀತಿ ಬದುಕಿ ಬಾಳುವುದೇ ಜೀವನದ ಗುರಿಯಾಗಬೇಕಾಗಿದೆ. ಲಿಂ.ಶ್ರೀ ಮಡಿವಾಳ ಶಿವಾಚಾರ್ಯ ಸ್ವಾಮಿಗಳು ಸಾತ್ವಿಕತೆಯ ಸಾಕಾರಮೂರ್ತಿ, ಸಕಲರಿಗೂ ಒಳಿತನ್ನೇ ಬಯಸಿ ಬಾಳಿದವರು. ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಸಮಕಾಲೀನರಾದ ಶ್ರೀಗಳು ಪೂಜಾ ತಪಸ್ಸು ಧ್ಯಾನ ಜ್ಞಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅವರ ಆದರ್ಶ ಚಿಂತನೆ ತೋರಿದ ದಾರಿ ಭಕ್ತಸಂಕುಲಕ್ಕೆ ದಾರಿದೀಪ. 32ನೇ ಪುಣ್ಯಸ್ಮರಣೋತ್ಸವ ಸಮಾರಂಭ ಇಂದಿನ ಪಟ್ಟಾಧ್ಯಕ್ಷರಾದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ತಮಗೆ ಸಂತೋಷ ತಂದಿದೆ ಎಂದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಸಮಾರಂಭ ಉದ್ಘಾಟಿಸಿ ಲಿಂ. ಶ್ರೀ ಮಡಿವಾಳ ಶಿವಾಚಾರ್ಯರ ಆದರ್ಶ ಧಾರ್ಮಿಕ ಮೌಲ್ಯಗಳನ್ನು ನೆನಪಿಸಿಕೊಂಡರು.