ಸಾರ್ಥಕ ಬದುಕಿಗೆ ಸರಳ ಸೂತ್ರ ಹೇಳಿದ ಶರಣರು

ಕಲಬುರಗಿ:ಆ.30: 12ನೇ ಶತಮಾನದಲ್ಲಿ ನಡೆದ ವಚನ ಚಳವಳಿಗೆ ಸಗರನಾಡಿನ ಶಿವಶರಣರ ಕೊಡುಗೆ ಅಪಾರವಾಗಿದೆ. ಕನ್ನಡದ ಮೊದಲ ವಚನಕಾರ ಜೇಡರ ದಾಸಿಮಯ್ಯ ಹಾಗೂ ಕೊನೆಯ ವಚನಕಾರ ಷಣ್ಮುಖ ಶಿವಯೋಗಿಗಳು ಸಗರನಾಡಿನವರಾಗಿರುವುದು ಹೆಮ್ಮೆಯ ಸಂಗತಿ ಎಂದು ಪತ್ರಕರ್ತ-ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಇಲ್ಲಿನ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಸಗರ ನಾಡಿನ ಶಿವಶರಣರು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, 12ನೇ ಶತಮಾನ ತಿರುವು ಮುರುವು ಆಗಿ 21ನೇ ಶತಮಾನಕ್ಕೆ ಕಾಲಿಟ್ಟಿರುವ ಈ ಸಂದರ್ಭದಲ್ಲೂ ಶರಣರ ವಚನಗಳು, ವಿಚಾರಗಳು ಬದುಕಿಗೆ ಪ್ರಸ್ತುತವಾಗಿವೆ ಎಂದರು.

ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಮಾಜೋದ್ಧಾರ್ಮಿಕ ಆಂದೋಲನದಲ್ಲಿ ಸಗರನಾಡಿನ ಕೆಂಭಾವಿ ಭೋಗಣ್ಣ, ಚಂದಿಮರಸ, ಅಗ್ಘವಣಿ ಹೊನ್ನಯ್ಯ, ಹಾವಿನಾಳ ಕಲ್ಲಯ್ಯ, ಶೀಲವಂತ, ಸಗರದ ಬೊಮ್ಮಣ್ಣ, ನೆಲೋಗಿಯ ಕೋಲ ಶಾಂತಯ್ಯ ಸೇರಿದಂತೆ ಹತ್ತೆಂಟು ಶರಣರು ಭಾಗವಹಿಸಿದ್ದರು. ಅವರ ತರುವಾಯ ಅದೇ ಹಾದಿಯಲ್ಲೇ ದಿಗ್ಗಿ ಸಂಗಮನಾಥ, ಕೊಡೇಕಲ್ ಬಸವಣ್ಣ, ಶರಣಬಸವೇಶ್ವರರು, ಕಡಕೋಳ ಮಡಿವಾಳಪ್ಪ, ಚೆನ್ನೂರ ಜಲಾಲ್‍ಸಾಬ ಮುಂತಾದವರು ಸೌಹಾರ್ದ ಪರಂಪರೆಗೆ ನಾಂದಿ ಹಾಡಿದ್ದಾರೆ ಎಂದು ವಿವರಿಸಿದರು.

ತಾವು ಮಾಡುವ ಕಾಯಕವನ್ನೇ ತಮ್ಮ ಅಡ್ಡ ಹೆಸರುಗಳನ್ನಾಗಿ ಬಳಸುವುದರ ಮೂಲಕ ಜಾತಿ ನಿರ್ಮೂಲನೆಗೆ ತೊಡಗಿದ ಶರಣರು, ತಮ್ಮ ಕಾಯಕದ ಉಪಕರಣಗಳಿಂದಲೇ ಅಧ್ಯಾತ್ಮವನ್ನು ಬೋಧಿಸಿದರು. ಶರಣರು ಸಾರ್ಥಕ ಬದುಕಿಗೆ ಸರಳಸೂತ್ರಗಳನ್ನು ಹೇಳಿದರು. ಶರಣರ ವಿಚಾರಗಳ ಪ್ರಚಾರ ಕಾರ್ಯವನ್ನು ಕಳೆದ 61 ವರ್ಷಗಳಿಂದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಮುನ್ನಡೆಸಿಕೊಂಡು ಹೊರಟಿರುವುದು ಸ್ತುತ್ಯರ್ಹವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪೂಜ್ಯಶ್ರೀ ಡಾ. ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ. ದಾಕ್ಷಾಯಣಿ ಎಸ್. ಅಪ್ಪ, ಪೂಜ್ಯ ಚಿರಂಜಿವಿ ದೊಡ್ಡಪ್ಪ ಅಪ್ಪ ಸಾನ್ನಿಧ್ಯ ವಹಿಸಿದ್ದರು. ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಸಾವಿತ್ರಿ ಜಿ. ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಪ್ರೊ. ಕಲ್ಯಾಣರಾವ ಪಾಟೀಲ, ಸಂಚಾಲಕ ಡಾ. ಶೀವರಾಜ ಶಾಸ್ತ್ರಿ ಹೇರೂರ ವೇದಿಕೆಯಲ್ಲಿದ್ದರು. ಸಿದ್ಧಲಿಂಗಪ್ಪ ಎನ್. ಕಣ್ಣಿ ನಿರೂಪಿಸಿದರು. ರಾಜೇಶ್ವರಿ ಸ್ವಾಗತಿಸಿದರು. ಕವಿತಾ ಹಿರೇಮಠ ವಂದಿಸಿದರು.


ಸಗರನಾಡು ಶರಣರ ಬೀಡು

ಸುರಪುರ, ಶಹಾಪುರ ಹಾಗೂ ಜೇವರ್ಗಿ ತಾಲ್ಲೂಕಿನ ಬಹುಭಾಗವನ್ನು ಒಳಗೊಂಡಿರುವ ಭೌಗೋಳಿಕ ಕ್ಷೇತ್ರವನ್ನು ಸಗರನಾಡು ಎಂದು ಗುರುತಿಸಲಾಗುತ್ತಿದ್ದು, ಕೃಷ್ಣೆ, ಭೀಮಾನದಿಗಳ ತೋಳತೆಕ್ಕೆಯಲ್ಲಿ ಬರುವ ನಾಡನ್ನು ಈ ಹಿಂದೆ ಸಗರಾದ್ರಿ ಎಂಬ ಚಕ್ರವರ್ತಿ ರಾಜ್ಯವಾಳುತ್ತಿದ್ದ. ಶಿವನ ಮುಡಿಯಿಂದ ಗಂಗೆಯನ್ನು ಭುವಿಗೆ ತಂದ ಭಗೀರಥ ಪ್ರಯತ್ನ ಕೂಡ ಇದೇ ನೆಲದಲ್ಲಿ ಘಟಿಸಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಸಗರನಾಡು ಶರಣರ ಬೀಡಾಗಿದೆ ಎಂದು ಡಾ. ಶಿವರಂಜನ್ ಸತ್ಯಂಪೇಟೆ ತಿಳಿಸಿದರು.