ಸಾರ್ಥಕ ಜೀವನ ನಡೆಸಲು ಧಮ್ಮ ಪಾಲನೆ ಅವಶ್ಯಕ

ವಾಡಿ: ಏ.9: ಮನುಷ್ಯನಿಗೆ ಸಾರ್ಥಕ ಜೀವನ ನಡೆಸಲು ಧಮ್ಮ ಮೌಲ್ಯಗಳನ್ನು ಸಾರುವ ಧಮ್ಮ ಗ್ರಂಥ ಮತ್ತು ಧಮ್ಮ ಬೋಧಿಸಲು ಗುರುಗಳು ಬೇಕು. ಅದನ್ನು ನಾವು ಪಾಲನೆ ಮಾಡಲೇ ಬೇಕು ಎಂದು ಅಣದೂರಿನ (ಬೀದರ್) ಪೂಜ್ಯ ಭಂತೆ ಧಮ್ಮಾನಂದ ಮಹಾಥೇರೋ ಹೇಳಿದರು.

ಪಟ್ಟಣದ ಧಮ್ಮದೀಕ್ಷಾ ಭೂಮಿ ಸಿದ್ಧಾರ್ಥ ಭವನದಲ್ಲಿ ಸಿದ್ಧಾರ್ಥ ತರುಣ ಸಂಘದ ವತಿಯಿಂದ ಗುರುವಾರ ಸಾಯಂಕಾಲ ಹಮ್ಮಿಕೊಂಡ ಕಲ್ಯಾಣ ಕರ್ನಾಟಕ ಧಮ್ಮ ಪ್ರವಚನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಧಮ್ಮ ಆಲಿಸಲು ಸಮುದಾಯ ಮಧ್ಯೆ ಒಂದು ವಿಹಾರ ಬೇಕು ಆ ವಿಹಾರದಲ್ಲಿ ಭಂತೇಜಿಗಳು ಇರಬೇಕು. ಆ ಭಂತೆಜಿಗಳಿಂದ ನಿತ್ಯ ಸಾಧ್ಯವಾಗದಿದ್ದರೂ ವಾರಕ್ಕೊಮ್ಮೆಯಾದರೂ ಬುದ್ಧ ಧಮ್ಮ ಸಂಘದ ಸಾರ ಸವಿಯಬೇಕು. ಆ ಮೂಲಕ ಪ್ರತಿಯೊಬ್ಬರೂ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಬುದ್ದನ ಸಂದೇಶಗಳು ಕರುಣೆ ಮೈತ್ರಿ ಶಾಂತಿ ಹಾಗೂ ಪ್ರೀತಿಯನ್ನು ಉಣಬಡಿಸುತ್ತವೆ. ಅವು ಒಂದು ಜಾತಿ, ಧರ್ಮ ಅಥವಾ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ಇಡೀ ಮನುಷ್ಯ ಕುಲದ ಪ್ರಗತಿಗಾಗಿ ಸಾರಲ್ಪಟ್ಟಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನದಲ್ಲಿಯೂ ಅಡಕವಾಗಿರುವುದನ್ನು ಕಾಣಬಹುದು ಎಂದರು.

ಪೂಜ್ಯ ಭಂತೆ ಜ್ಞಾನ ಸಾಗರ ಮಾತನಾಡಿ, ಬೌದ್ಧಧಮ್ಮ ವಿನಯವನ್ನು ಕಲಿಸುತ್ತದೆ. ವಿನಯ ಇದ್ದವರಿಗೆ ಎಲ್ಲರಿಂದ ಪ್ರೀತಿಗೆ ಪಾತ್ರರಾಗುತ್ತಾರೆ. ಸಹಾಯ ಸಹಕಾರ ನೀಡಿದವರನ್ನು ನಾವು ಸದಾ ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸಬೇಕು. ಎಂದರು.

ಪೂಜ್ಯ ಭಂತೆ ನಾಗರತ್ನ, ಭಿಕ್ಖುಣಿ ಮಾತಾಜಿ ಅರ್ಚಸ್ಮತಿ ಸಾನಿದ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ಸೂರ್ಯಕಾಂತ ರದ್ದೇವಾಡಿ, ಖೇಮಲಿಂಗ ಬೆಳಮಗಿ, ರವಿ ಕೋಳಕೂರ, ಸಂತೋಷ ಜೋಗೂರ, ಶರಣಬಸ್ಸು ಶಿರೂರಕರ, ರಮೇಶ ಬಡಿಗೇರ, ಸಿದ್ಧಯ್ಯಶಾಸ್ತ್ರೀ ನಂದೂರಮಠ, ಭೀಮಶಾ ಮೈನಾಳಕರ, ಸಿದ್ದಾರ್ಥ ತರುಣ ಸಂಘದ ಪದಾಧಿಕಾರಿಗಳಾದ ಪ್ರಕಾಶ ತೆಲ್ಲೂರ, ಶಿವಾನಂದ ಬೆಳಮಗಿ, ದಿಲೀಪ ಮೈನಾಳಕರ, ಶರಣು ರಾವೂರ, ಚಿಂಟು, ಅರುಣ, ಕೆರೂರ, ವಿಶಾಲ ಕಾಚಾಪುರ, ಮಹೇಶ ರಾಜಳ್ಳಿ ಸೇರಿದಂತೆ ಹಲವರಿದ್ದರು.